ನವದೆಹಲಿ: ಮಿತಿ ಮೀರಿದ ವೇಗದಲ್ಲಿ ಬರುತ್ತಿದ್ದ ಕಾರೊಂದನ್ನು ತಡೆದ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದು ಆತನನ್ನು ಕಾರಿನ ಬಾನೆಟ್ ಮೇಲೆ 2 ಕಿ.ಮೀ. ವರೆಗೂ ಕರೆದೊಯ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಸೆಕ್ಟರ್ 8ರಲ್ಲಿ ಕೆಲಸ ಮಾಡುತ್ತಿದ್ದ ಪೇದೆ ರೋಹಿತ್ ಎಂಬುವವರು ಜ್ಯೋತಿ ಪ್ರಕಾಶ್ ರಸ್ತೆಯಲ್ಲಿ ಬಿಳಿ ಬಣ್ಣದ ಕಾರೊಂದನ್ನು ತಡೆಯಲು ಯತ್ನಿಸಿದರು. ಆದರೆ, ಚಾಲಕ ಕಾರನ್ನು ನಿಲ್ಲಿಸದೆ ಪೇದೆಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಕಾರಿನ ಬಾನೆಟ್ಅನ್ನು ಬಿಗಿಯಾಗಿ ಹಿಡಿದ ಪೇದೆಯು ಕಾರನ್ನು ನಿಲ್ಲಿಸುವಂತೆ ಎಷ್ಟೇ ಮನವಿ ಮಾಡಿದರೂ ಚಾಲಕ ನಿಲ್ಲಿಸದೆ ಸುಮಾರು ಎರಡು ಕಿ.ಮೀ. ವರೆಗೆ ಎಳೆದೊಯ್ದಿದ್ದಾನೆ. ಇದನ್ನು ಕಂಡ ಯುವಕನೊಬ್ಬ ಪೊಲೀಸರಿಗೆ ಮಾಹಿತಿ ಮುಟ್ಟಿಸಿದಾಗ ಕಾರನ್ನು ಟ್ರೇಸ್ ಮಾಡಲು ಯತ್ನಿಸಲಾಯಿತು. ಆದರೆ, ಚಾಲಕ ಪೇದೆಯನ್ನು ಮಧ್ಯ ದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಕಾರು ಪೇದೆಯನ್ನು ಬಾನೆಟ್ ಮಾಲೆ ಹೊತ್ತು ಮುಂದಕ್ಕೆ ಚಲಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫುಟೇಜ್ಗಳ ನೆರವಿನಿಂದ ಕಾರಿನ ಮಾಲಿಕನ ಗುರುತು ಪತ್ತೆಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ. ಸದ್ಯ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಗುರುಗ್ರಾಮದಲ್ಲಿ ಇಂಥ ಘಟನೆಗಳು ಸಾಮಾನ್ಯವಾಗಿವೆ. ಕಳೆದ ಎರಡು ತಿಂಗಳಿನಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.