ನವದೆಹಲಿ: ಭಾರತದ ಗಡಿಯಲ್ಲಿ ಇತ್ತೀಚೆಗೆ ನಡೆದ ಚೀನಾದ ಆಕ್ರಮಣವನ್ನು ವಿರೋಧಿಸಿ ಚೀನಾದ ಸರಕುಗಳನ್ನು ಬಹಿಷ್ಕರಿಸಲು ಮತ್ತು ಚೀನಾದ ಪ್ರಜೆಗಳಿಗೆ ಯಾವುದೇ ವಸತಿ ಸೌಕರ್ಯಗಳನ್ನು ಒದಗಿಸದಿರಲು ದೆಹಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ ನಿರ್ಧರಿಸಿದೆ.
ಈ ಕುರಿತು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಗೆ ಪತ್ರ ಬರೆದಿರುವ ಹೋಟೆಲ್ ಅಸೋಸಿಯೇಷನ್, ಚೀನಿ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ.
ನಮ್ಮ ಸಂಘವು ಸಿಎಐಟಿಯ ಅಭಿಯಾನವನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ನಾವು ಸಂತೋಷ ಪಡುತ್ತೇವೆ. ನಮ್ಮ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುತ್ತಿರುವ ಚೀನಿ ವಸ್ತುಗಳನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ. ಇನ್ಮುಂದೆ ನಾವು ಯಾವುದೇ ಚೀನಿ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ದೆಹಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘವು ಸಿಎಐಟಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.
ನಮ್ಮ ಕೆಚ್ಚೆದೆಯ ಭಾರತೀಯ ಸೈನಿಕರ ಮೇಲೆ ಚೀನಾ ಪದೇ ಪದೇ ದಾಳಿ ನಡೆಸುತ್ತಿರುವ ಸಮಯದಲ್ಲಿ ಚೀನಾದ ಯಾವುದೇ ಪ್ರಜೆಗೆ ಕೊಠಡಿಗಳನ್ನು ನೀಡದಿರಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ದೆಹಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ನಿರ್ಧಾರವನ್ನು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸ್ವಾಗತಿಸಿದೆ. ಚೀನಿ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಎಲ್ಲಾ ವರ್ಗದ ಜನರ ಬೆಂಬಲ ಇರುವುದು ಇದರಿಂದ ತಿಳಿಯುತ್ತದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.