ಹೈದರಾಬಾದ್: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಎಂಟು ವಾರಗಳು ಕಳೆದಿವೆ. ಗಲ್ವಾನ್ ಗಡಿಯಲ್ಲಿ ಜೂನ್ 15ರಂದು ಚೀನಾ ಪಿಎಲ್‌ಎ ಜೊತೆಗೆ ಸಂಘರ್ಷ ಉಂಟಾಗಿ 20 ಭಾರತೀಯ ಯೋಧರು ಹುತಾತ್ಮರಾದ ಕೆಲವು ವಾರಗಳ ನಂತರ ಸೀಮಿತ ಮಟ್ಟದಲ್ಲಿ ಸೇನೆ ಹಿಂಪಡೆತ ಆರಂಭವಾಗಿದೆ.
ವಿಶೇಷ ಪ್ರತಿನಿಧಿ ಮಟ್ಟದಲ್ಲಿ ಎರಡೂ ದೇಶಗಳು ಗಡಿ ಬಗ್ಗೆ ಮಾತುಕತೆ ನಡೆಸಿದ ನಂತರ ಈ ಪ್ರಕ್ರಿಯೆ ಆರಂಭವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ದೇಶಿಯ ಕೌನ್ಸಿಲರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ನಿನ್ನೆ (ಭಾನುವಾರ) ಸುಮಾರು ಎರಡು ಗಂಟೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಲಡಾಖ್‌ನಲ್ಲಿನ ಪಶ್ಚಿಮ ವಲಯದ ಬಗ್ಗೆ ‘ಮುಕ್ತ ಮತ್ತು ಆಳವಾದ ಅಭಿಪ್ರಾಯಗಳನ್ನು’ ಇಬ್ಬರೂ ಮುಖಂಡರು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ವಿದೇಶಾಂಗ ಸಚಿವ ಜೈ ಶಂಕರ್ ಗಲ್ವಾನ್ ಕಣಿವೆಯಲ್ಲಿ ನಡೆದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ವಾಂಗ್ ಯಿ ಜೊತೆಗೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದರು. ಕೋವಿಡ್ 19 ಸಹಕಾರದ ಕುರಿತು ಆರ್‌ಐಸಿ (ರಷ್ಯಾ, ಭಾರತ, ಚೀನಾ) ರೂಪುರೇಷೆ ಅಡಿಯಲ್ಲಿ ರಷ್ಯಾದ ವಿದೇಶಾಂಗ ಸಚಿವರ ಜೊತೆ ನಡೆದ ವರ್ಚುವಲ್ ಮಾತುಕತೆಯಲ್ಲೂ ಇಬ್ಬರೂ ಮುಖಂಡರು ಭಾಗವಹಿಸಿದ್ದರು. ಆದರೆ, ಆರ್‌ಐಸಿ ಅಜೆಂಡಾದಲ್ಲಿ ಎಲ್‌ಎಸಿ ವಿವಾದ ಪ್ರಸ್ತಾಪವಾಗಿರಲಿಲ್ಲ.
ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ದೋವಲ್ ಮತ್ತು ವಾಂಗ್ ಯಿ ಇಬ್ಬರನ್ನೂ ವಿಶೇಷ ಪ್ರತಿನಿಧಿಯನ್ನಾಗಿ ನೇಮಕ ಮಾಡಿರುವುದರಿಂದ ಭಾನುವಾರದ ಸಂವಾದ ಮಹತ್ವ ಪಡೆದಿತ್ತು. ಚೀನಾದಲ್ಲಿ ಪ್ರಸ್ತುತ ಸರ್ಕಾರದಲ್ಲಿ ಶ್ರೇಣಿ ವ್ಯವಸ್ಥೆಯ ಪ್ರಕಾರ, ವಿದೇಶಾಂಗ ಸಚಿವರಿಗಿಂತ ರಾಷ್ಟ್ರೀಯ ಕೌನ್ಸಿಲರ್ ಹೆಚ್ಚಿನ ಸ್ಥಾನ ಹೊಂದಿರುತ್ತಾರೆ. 2017ರವರೆಗೆ ಚೀನಾದ ರಾಷ್ಟ್ರೀಯ ಕೌನ್ಸಿಲರ್ ಮತ್ತು ವಿಶೇಷ ಪ್ರತಿನಿಧಿ ಆಗಿದ್ದ ಯಾಂಗ್ ಜೈಜಿ ಅವರ ಜೊತೆಗೆ ದೋವಲ್ ಮಾತುಕತೆ ನಡೆಸುತ್ತಿದ್ದರು. ಆಗ ವಾಂಗ್ ಯಿ ಕೇವಲ ವಿದೇಶಾಂಗ ಸಚಿವರಾಗಿದ್ದರು.
ಇಬ್ಬರು ವಿಶೇಷ ಪ್ರತಿನಿಧಿಗಳ ಮಧ್ಯೆ ಸಂವಾದವನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಉನ್ನತ ಮಟ್ಟದ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಗೆ ಭಾರತ ಸೂಚಿಸಿತ್ತು. ಮೂಲಗಳ ಪ್ರಕಾರ, 'ಭಿನ್ನಾಭಿಪ್ರಾಯಗಳು ವಿವಾದಗಳನ್ನಾಗಿಸಲು ಅವಕಾಶ ಕೊಡಬಾರದು' ಎಂದು ಇಬ್ಬರೂ ಅಧಿಕಾರಿಗಳು ಒಪ್ಪಿದ್ದಾರೆ. ಇಂಡೋ-ಚೀನಾ ಗಡಿಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳಲು ಉಭಯ ದೇಶದ ರಾಜಕೀಯ ನಾಯಕರು ಹೊಂದಿರುವ ಬದ್ಧತೆಯನ್ನು ಈ ವೇಳೆ ಪುನರುಚ್ಚರಿಸಲಾಗಿದೆ.
ಎಲ್‌ಎಸಿಯಲ್ಲಿ ಶೀಘ್ರದಲ್ಲೇ ಸೇನೆಯನ್ನು ಹಿಂಪಡೆಯುವುದು ಮತ್ತು ಗಡಿ ವ್ಯಾಪ್ತಿಯಲ್ಲಿ ಶಾಂತಿ- ಸೌಹಾರ್ದತೆ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಒಬ್ಬರೂ ಒಪ್ಪಿದ್ದಾರೆ. ಪ್ರಸ್ತುತ ಎಲ್‌ಎಸಿಯಲ್ಲಿ ತ್ವರಿತವಾಗಿ ಸೇನೆ ಹಿಂಪಡೆಯುವ ಪ್ರಕ್ರಿಯೆಯನ್ನು ಎರಡೂ ಕಡೆಯವರು ಪೂರ್ಣಗೊಳಿಸಬೇಕು ಎಂದು ಅಂಗೀಕರಿಸಲಾಗಿದೆ ಎಂಬುದನ್ನು ಭಾರತದ ಔಪಚಾರಿಕ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಭಾರತೀಯ ಅಧಿಕಾರಿಗಳ ಪ್ರಕಾರ, ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಹಂತ- ಹಂತವಾಗಿ ಸೇನೆ ಹಿಂಪಡೆಯುವಿಕೆ ಪ್ರಕ್ರಿಯೆ ನಡೆಸಲು ಇಬ್ಬರೂ ವಿಶೇಷ ಪ್ರತಿನಿಧಿಗಳು ಒಪ್ಪಿದ್ದಾರೆ. ಅಲ್ಲದೆ, ಹಲವು ಹಂತದಲ್ಲಿ ಸೇನಾಧಿಕಾರಿಗಳ ಮಾತುಕತೆಗೂ ಅವರು ಒಪ್ಪಿದ್ದಾರೆ ಎಂದು ಹೇಳಲಾಗಿದೆ.
ಉಭಯ ರಾಷ್ಟ್ರಗಳ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಗೌರವಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಹಾಗೂ ವಾಸ್ತವ ಸ್ಥಿತಿಯನ್ನು ಬದಲಿಸಲು ಯಾವುದೇ ಏಕಪಕ್ಷೀಯ ಕ್ರಮ ತೆಗೆದುಕೊಳ್ಳಬಾರದು. ಗಡಿ ಪ್ರದೇಶಗಳಲ್ಲಿ ಮುಂದೆ ಉಂಟಾಗಬಹುದಾದ ಯಾವುದೇ ಶಾಂತಿ ಮತ್ತು ಸೌಹಾರ್ದತೆ ಕದಡುವ ಸನ್ನಿವೇಶಗಳನ್ನು ದೂರವಿಡಲು ಒಮ್ಮತ ಮೂಡಿದೆ ಎಂದು ಹೇಳಿಕೆಯಲ್ಲಿದೆ. ಪೂರ್ವ ಲಡಾಖ್‌ನಲ್ಲಿ ಹಂತ- ಹಂತವಾಗಿ ಸೇನೆ ಹಿಂಪಡೆಯುವ ಬಗ್ಗೆ ಕಾಪ್ಸ್ ಕಮಾಂಡರ್ ಮಟ್ಟದಲ್ಲಿ ನಡೆದ ಮಾತುಕತೆಯ ಐದು ದಿನಗಳ ನಂತರ ಈ ಮಾತುಕತೆ ನಡೆದಿದೆ.
ಆದರೆ, ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಪ್ರಾಮುಖ್ಯತೆ ನೀಡುವುದು. ಎರಡೂ ಏಷ್ಯಾದ ನೆರೆ ದೇಶಗಳ ಸಾಮಾನ್ಯ ಹಿತಾಸಕ್ತಿಯ ಬಗ್ಗೆ ಪ್ರಸ್ತಾಪಿಸಿದ ಚೀನಾದ ವಿದೇಶಾಂಗ ಸಚಿವರ ಔಪಚಾರಿಕ ಹೇಳಿಕೆಯಲ್ಲಿ, ಎಲ್‌ಎಸಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರುವಿಕೆಯ ಪ್ರಸ್ತಾಪವಿಲ್ಲ. ಬದಲಿಗೆ ಚೀನಾದ ಹೇಳಿಕೆಯಲ್ಲಿ ಗಲ್ವಾನ್ ಕಣಿವೆಯ ಹಿಂಸಾಚಾರವು ಭಾರತೀಯ ಯೋಧರಿಂದಾಗಿಯೇ ನಡೆದಿದೆ ಎಂಬ ಟಿಪ್ಪಣಿ ಇತ್ತು.
“ಇತ್ತೀಚೆಗೆ ಗಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಮಧ್ಯೆ ನಡೆದಿರುವ ಸಂಗತಿ ಸ್ಪಷ್ಟವಾಗಿದೆ. ಚೀನಾ ತನ್ನ ಭೂಭಾಗದ ಸಮಗ್ರತೆ ಮತ್ತು ಗಡಿ ಪ್ರದೇಶ ಹಾಗೂ ಶಾಂತಿಯನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವುದನ್ನು ಮುಂದುವರಿಸುತ್ತದೆ.” ಎಂದು ಬೀಜಿಂಗ್ ಪ್ರಕಟಿಸಿದ ಹೇಳಿಕೆಯಲ್ಲಿ ವಿವರಿಸಲಾಗಿದೆ.
ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಚರ್ಚೆ ಮುಂದುವರಿಸಲು ಭಾರತ ಮತ್ತು ಚೀನಾ ಒಪ್ಪಿವೆ. ಅಷ್ಟೆ ಅಲ್ಲ, ಭಾರತ- ಚೀನಾ ಗಡಿಯಲ್ಲಿ ಸಲಹೆ ಮತ್ತು ಸಹಕಾರ ತಾಂತ್ರಿಕತೆ (ಡಬ್ಲ್ಯೂಎಂಸಿಸಿ) ಅಡಿಯಲ್ಲಿ ಚರ್ಚೆಗೂ ಉಭಯ ದೇಶಗಳು ಒಪ್ಪಿವೆ. ಅಲ್ಲದೆ, ಸಕಾಲಕ್ಕೆ ಮಾತುಕತೆಯ ಫಲಿತಾಂಶವನ್ನು ಪ್ರದರ್ಶಿಸಲೂ ಎರಡೂ ದೇಶದ ವಿಶೇಷ ಪ್ರತಿನಿಧಿಗಳು ಒಪ್ಪಿದ್ದಾರೆ ಎಂದು ಭಾರತದ ಅಧಿಕಾರಿಗಳು ಒಪ್ಪಿದ್ದಾರೆ.
ಉಭಯ ದೇಶಗಳ ಒಪ್ಪಂದಗಳು ಮತ್ತು ಶಿಷ್ಟಾಚಾರಗಳಿಗೆ ಅನುಗುಣವಾಗಿ ಭಾರತ ಮತ್ತು ಚೀನಾ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಇಬ್ಬರೂ ವಿಶೇಷ ಪ್ರತಿನಿಧಿಗಳು ಕಾಲಕಾಲಕ್ಕೆ ಸಂವಾದವನ್ನು ನಡೆಸಲೂ ಸಮ್ಮತಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ವಿವರಿಸಿದೆ.