ಮುಂಬೈ: 2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ಅಭಿಮಾನಿಗಳಲ್ಲಿ ತುಸು ಹೆಚ್ಚೇ ಕುತೂಹಲವಿದೆ. ಇದೇ ವಿಷಯವಾಗಿ ಅವರನ್ನು ಮಾತನಾಡಿಸಿದಾಗ 'ಜನವರಿವರೆಗೆ ಏನು ಕೇಳಬೇಡಿ' ಎಂಬ ಉತ್ತರ ನೀಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಮೈದಾನಕ್ಕಿಳಿಯದ ಮಾಹಿ, ವಿಂಡೀಸ್ ಸರಣಿಗಾಗಿ ತಂಡಕ್ಕೆ ವಾಪಾಸ್ ಬರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದ್ರೆ ಇದೀಗ ಅವರು ಈ ಸರಣಿಯಿಂದಲೂ ಕಣಕ್ಕಿಯಲ್ಲ ಅನ್ನೋ ವಿಚಾರ ಗೊತ್ತಾಗಿದೆ. ಮುಂಬೈನಲ್ಲಿ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಮುಂದಿನ ಜನವರಿವರೆಗೆ ಕ್ರಿಕೆಟ್ ಬಗ್ಗೆ ಏನೂ ಕೇಳಬೇಡಿ ಎಂದು ಸೂಚ್ಯವಾಗಿ ಹೇಳಿದ್ರು.
ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ನಿನ್ನೆ ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಮಾತನಾಡುತ್ತಾ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವರು ನೀಡುವ ಪ್ರದರ್ಶನದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದೀಗ ತಂಡದ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸುತ್ತಿರುವ ರಿಷಭ್ ಪಂತ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, 2020ರ ಐಸಿಸಿ ಟಿ-20 ಕ್ರಿಕೆಟ್ ವೇಳೆಗೆ ಧೋನಿ ತಂಡ ಸೇರಿಕೊಳ್ಳಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ.