ತೆಲಂಗಾಣ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಹೈದರಾಬಾದ್ನಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಔಷಧಿ ಮೀನು ಕಾರ್ಯಕ್ರಮ ಈ ಬಾರಿ ನಡೆಯದಂತೆ ನೋಡಿಕೊಳ್ಳಿ ಎಂದು ಬಲಾಲಾ ಹಕ್ಕುಳ ಸಂಘಮ್ ಎಂಬ ಎನ್ಜಿಒ ಇಲ್ಲಿನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಅಸ್ತಮಾ ಮತ್ತು ಇತರೆ ಉಸಿರಾಟ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಈ ಔಷಧಿ ಮೀನು ನೀಡಲು ಸಾಮಾನ್ಯವಾಗಿ ಪ್ರತಿ ವರ್ಷದ ಜೂನ್ ಮೊದಲ ವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಾರೆ. ಈ ಹಿನ್ನೆಲೆ ಈ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸಂಸ್ಥೆ ಕೋರಿದೆ.
ಈ ಬಗ್ಗೆ ಮಾತನಾಡಿರುವ ಎನ್ಜಿಒದ ಗೌರವಾಧ್ಯಕ್ಷ ಅಚ್ಯುತ್ ರಾವ್, ಇಂತಹ ಹಲವು ರೋಗಗಳಿಗೆ ಈ ಔಷಧಿ ಮೀನು ಪದ್ಧತಿ ಅವೈಜ್ಞಾನಿಕ ಅಂತ ಈಗಾಗಲೇ ಸಾಬೀತಾಗಿದೆ. ಅಲ್ಲದೆ ಈ ಕಾರ್ಯಕ್ರಮ ಆಯೋಜಕರಾದ ಭಾಥಿನಿ ಸಹೋದದರಿಗೆ ರಾಜ್ಯ ಸರ್ಕಾರ ಯಾವುದೇ ಅನುಕೂಲ ಮಾಡಿಕೊಡಬಾರದು ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿರುವಂತೆ ವೃದ್ಧರು ಹಾಗೂ ಮಕ್ಕಳು ಈ ಕೊರೊನಾ ಸೋಂಕಿಗೆ ಅತಿ ಬೇಗನೆ ತುತ್ತಾಗುತ್ತಾರೆ ಎಂದಿದೆ. ಈ ಕಾರ್ಯಕ್ರಮಗಳಲ್ಲಿ ಯಾರಾದರೂ ಒಬ್ಬ ಸೋಂಕಿತ ಬಂದಿದ್ದರೆ, ಅಲ್ಲಿರುವ ಎಲ್ಲರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.