ಕೊಚ್ಚಿ: ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಬಂಧಿಸಲು ಕಸ್ಟಮ್ಸ್ ಇಲಾಖೆಗೆ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಆರ್ಥಿಕ ಅಪರಾಧಗಳು) ಅನುಮತಿ ನೀಡಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿವಶಂಕರ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಅಂದರೆ ಜ. 9 ರಂದು ಕೇರಳ ವಿಧಾನಸಭಾ ಸ್ಪೀಕರ್ ಸಹಾಯಕ ಖಾಸಗಿ ಕಾರ್ಯದರ್ಶಿ ಕೆ. ಅಯ್ಯಪ್ಪನ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಯ ವೇಳೆ ಡಾಲರ್ ಕಳ್ಳಸಾಗಣೆ ಬೆಳಕಿಗೆ ಬಂದಿದೆ. ಇದನ್ನು ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕಸ್ಟಮ್ಸ್ ಇಲಾಖೆ ತನಿಖೆ ನಡೆಸುತ್ತಿದೆ.
ಜುಲೈ 5, 2020 ರಂದು ತಿರುವನಂತಪುರಂನಲ್ಲಿ ಕಸ್ಟಮ್ಸ್ ಅಧಿಕಾರಿಗಳು 14.82 ಕೋಟಿ ರೂ. ಮೌಲ್ಯದ 30 ಕೆ ಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದೆ.