ಕೋಟಾ : ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ವೈದ್ಯಾಧಿಕಾರಿ ಮತ್ತು ಕಿರಿಯ ಇಂಜಿನಿಯರ್ನನ್ನು ರಾಜಸ್ಥಾನದ ಜಹಲ್ವಾರ್ ಮತ್ತು ಬರಾನ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ.
ಜಹಲ್ವಾರ್ ಜಿಲ್ಲೆಯ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರದೀಪ್ ಶರ್ಮಾ ಸ್ವಂತ ಊರಿನಿಂದ ಡೆಪ್ಯುಟೇಶನ್ ಕೊನೆಗೊಳಿಸದಿರಲು ಸಹಾಯಕ ಸಿಬ್ಬಂದಿ ಸಂಜಯ್ ಮೆಹ್ರಾ ಎಂಬಾತನಿಂದ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಜಹಲ್ವಾರ್ ಎಸಿಬಿ ಎಸ್ಪಿ ತಿಳಿಸಿದ್ದಾರೆ.
ಆರಂಭದಲ್ಲಿ ವೈದ್ಯಾಧಿಕಾರಿ ಪ್ರದೀಪ್ ಶರ್ಮಾ 15 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ, ಕೊನೆಗೆ 12 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಆರೋಪಿಯನ್ನು ಗುರುವಾರ ಕೋಟಾದ ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೀನಾ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜೈಪುರ ವಿದ್ಯಾ ವಿತ್ರಾನ್ ನಿಗಮ್ ಲಿಮಿಟೆಡ್ (ಜೆವಿವಿಎನ್ಎಲ್) ನ ಕಿರಿಯ ಇಂಜಿನಿಯರ್ ಲಂಚ ಪಡೆಯುತ್ತಿದ್ದಾಗ ಬರಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬರಾನ್ ಜಿಲ್ಲೆಯ ಸಮರಾನಿಯಾದಲ್ಲಿ ಕರ್ತವ್ಯದಲ್ಲಿದ್ದ ಆಂಧ್ರ ಪ್ರದೇಶದ ಕೃಷ್ಣಾ ಮೂಲದ ಗಂಪಾ ಪ್ರಮೋದ್ ವಿದ್ಯುತ್ ಮೀಟರ್ ಬದಲಿಸಲು ರಾಮಕೃಷ್ಣ ಕಿರಾದ್ ಎಂಬುವರಿಂದ 10 ಸಾವಿರ ರೂ. ಲಂಚಕ್ಕೆ ಪಡೆಯುತ್ತಿದ್ದಾಗ ನಿವಾಸದಿಂದಲೇ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಇಂಜಿನಿಯರ್ ನನ್ನು ಕೋಟಾದ ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.