ಚೆನ್ನೈ(ತಮಿಳುನಾಡು): ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಯಾವುದೇ ಕಾರಣಕ್ಕೂ ತಮಿಳುನಾಡಿನ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಎಂ.ಕೆ.ಅಳಗಿರಿ ಹೇಳಿದ್ದಾರೆ.
ತಮ್ಮ ಮುಂದಿನ ರಾಜಕೀಯ ಯೋಜನೆ ನಿರ್ಧರಿಸುವ ಉದ್ದೇಶದಿಂದ ಮಧುರೈನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸ್ಟಾಲಿನ್ ತಮಿಳುನಾಡು ಸಿಎಂ ಆಗಲು ಅವರ ಬೆಂಬಲಿಗರು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ಸಭೆ ಮಹತ್ವ ಪಡೆದುಕೊಂಡಿತ್ತು. ಜತೆಗೆ ಅವರು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಗಂಭೀರವಾಗಿ ಕೇಳಿ ಬಂದಿದ್ದವು.
ನಾನು ಕೇಂದ್ರ ಸಚಿವನಾಗಿದ್ದ ವೇಳೆ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಕರುಣಾನಿಧಿ ಕೇಳಿದ್ದರು. ಆ ವೇಳೆ ನಾನು ಒಪ್ಪಿಕೊಂಡೆ. ಆದರೆ ಈ ವೇಳೆ ನನಗೆ ದ್ರೋಹ ಮಾಡಲಾಯಿತು ಎಂದಿದ್ದಾರೆ. ಸ್ಟಾಲಿನ್ ಭವಿಷ್ಯದ ಸಿಎಂ ಎಂದು ಹೇಳುವ ಪೋಸ್ಟರ್ಗಳು ಯಾವಾಗಲೂ ಇರುತ್ತವೆ. ಆದರೆ ಅದು ಸಾಧ್ಯವಿಲ್ಲ ಎಂದು ಅಲಗಿರಿ ಅಭಿಪ್ರಾಯಪಟ್ಟರು. ಹೊಸ ಪಕ್ಷ ಪ್ರಾರಂಭಿಸುವಂತೆ ಅನೇಕರು ಸಲಹೆ ನೀಡಿದ್ದಾರೆ. ನನ್ನ ನಿರ್ಧಾರ ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.
ದಿವಂಗತ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ.ಅಳಗಿರಿ 2014ರಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ.