ನವದೆಹಲಿ: ಹಣ ವರ್ಗಾವಣೆ ಕೇಸ್ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಸೆಪ್ಟೆಂಬರ್ 17ರವರೆಗೆ ಇಡಿ ವಶಕ್ಕೆ ನೀಡಿ ದೆಹಲಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ಅವರಿಗೆ ಮತ್ತಷ್ಟು ಸಂಕಷ್ಟ ಮುಂದುವರಿದಿದೆ.
ಡಿಕೆಶಿ ಅವರನ್ನು ಇನ್ನೂ ಐದು ದಿನ ಇಡಿ ಕಸ್ಟಡಿಗೆ ನೀಡುವಂತೆ ಇಡಿ ಮನವಿ ಮಾಡಿ, ಕೋರ್ಟ್ನಲ್ಲಿ ವಾದ ಮಂಡನೆ ಮಾಡಿತ್ತು. ಆದರೆ ಡಿಕೆಶಿ ಪರ ವಕೀಲರು ಇನ್ನಷ್ಟು ವಿಚಾರಣೆ ಅಗತ್ಯ ಇಲ್ಲ, ಅನಾರೋಗ್ಯದ ಕಾರಣ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು.
ಇನ್ನು ಮುಂದಿನ ಐದು ದಿನಗಳ ಕಾಲ ಜಾರಿ ನಿರ್ದೇಶನಾಲದಿಂದ ವಿಚಾರಣೆಗೊಳಪಡಲಿರುವ ಡಿಕೆ ಶಿವಕುಮಾರ್ಗೆ ಪ್ರತಿದಿನ ವೈದ್ಯಕೀಯ ತಪಾಸಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆ ಆರಂಭ ಮಾಡುವುದಕ್ಕೂ ಮುಂಚಿತವಾಗಿ ಅವರಿಗೆ ತಪಾಸಣೆ ಕಡ್ಡಾಯ ಎಂದು ತಿಳಿಸಿದೆ.
ಐದು ದಿನ ಕಸ್ಟಡಿಗೆ ನೀಡಿ: ಡಿಕೆ ಶಿವಕುಮಾರ್ ಅವರನ್ನು ಮತ್ತಷ್ಟು ದಿನ ಕಸ್ಟಡಿ ಕೋರಿ ರಿಮಾಂಡ್ ಅರ್ಜಿ ಸಲ್ಲಿಸಿದ ಇಡಿ ಪರ ವಕೀಲರು. ಇಡಿ ಪರ ಹಿರಿಯ ವಕೀಲ ಎಂ.ಕೆ. ನಟರಾಜ್ ವಾದಿಸುತ್ತಿದ್ದಾರೆ. ಡಿಕೆಶಿ ನಮ್ಮ ಸಮಯ ಹಾಳು ಮಾಡುತ್ತಿದ್ದಾರೆ. ಅವರ ಎಲ್ಲ ಹೇಳಿಕೆಗಳನ್ನ ದಾಖಲು ಮಾಡಿದ್ದೇವೆ. ಅವರಿಂದ ಸಮರ್ಪಕ ಉತ್ತರ ನೀಡಿಲ್ಲ. ಹಾಗಾಗಿ ಅವರನ್ನ ಇನ್ನಷ್ಟು ದಿನ ವಿಚಾರಣೆಗೆ ನಮ್ಮ ಕಸ್ಟಡಿಗೆ ನೀಡಿ ಎಂದು ನ್ಯಾಯಾಧೀಶರ ಎದುರು ಇಡಿ ಮನವಿ ಮಾಡಿತ್ತು.
ಯಾಕೆ ಕಸ್ಟಡಿಗೆ ಡಿಕೆಶಿ ಅವರನ್ನು ಕೊಡಬೇಕು?
317 ಖಾತೆಗಳಲ್ಲಿ ಇರುವ ಹಣ, 800 ಕೋಟಿ ವ್ಯವಹಾರದ ಬಗ್ಗೆ ಇನ್ನೂ ನಾವು ಮಾಹಿತಿ ಪಡೆಯಬೇಕಿದೆ. ಮಗಳ ಹೆಸರಲ್ಲಿ ನಡೆದ ವ್ಯವಹಾರ, ಡಿಕೆಶಿ ಪ್ರಭಾವಿ ಆಗಿರುವುದರಿಂದ ಸಾಕ್ಷ್ಯ ನಾಶದ ಆತಂಕವಿದೆ.
ಇನ್ನು ಡಿಕೆಶಿ ಪ್ರಶ್ನೆಗೆ ಸಂಬಂಧ ಇರದ ಉತ್ತರವನ್ನ ನೀಡುತ್ತಿದ್ದಾರೆ. ಹೀಗಾಗಿ ಇನ್ನೂ ಐದು ದಿನ ಅವರನ್ನ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ನಟರಾಜ್ ಕೋರ್ಟ್ ಮುಂದೆ ವಾದ ಮಂಡನೆ ಮಾಡಿದ್ದಾರೆ.
ನಿಮ್ಮಿಂದ ಇನ್ನೈದು ದಿನದಲ್ಲಿ ಉತ್ತರ ಪಡೆಯಲು ಸಾಧ್ಯವೇ?:
ಈ ಸಂದರ್ಭದಲ್ಲಿ ಮರು ಪ್ರಶ್ನೆ ಹಾಕಿದ ನ್ಯಾಯಾಧೀಶರು, ಈ ಐದು ದಿನಗಳಲ್ಲಿ ನೀವು ಸಮರ್ಪಕ ಉತ್ತರ ಪಡೆಯಲು ಸಾಧ್ಯವೇ ಎಂದು ಕೇಳಿದ್ದಾರೆ.ಅಕ್ರಮ ಹಣ ವರ್ಗಾವಣೆ ಪ್ರಕರಣದ ವ್ಯಾಪ್ತಿ ಮೀರಿ ನೀವು ಇಡಿ ವಿಚಾರಣೆ ನಡೆಸಬಹುದಾ? ಹೀಗಂತಾ ಇಡಿ ಪರ ವಕೀಲರಿಗೆ ನ್ಯಾಯಾಧೀಶರು ಮುಂದುವರಿದ ಪ್ರಶ್ನಿಸಿದ್ದಾರೆ.
ಪಿಎಂಎಲ್ಎನ್ ಕಾಯ್ದೆ ವ್ಯಾಪ್ತಿಗೆ ಬರುತ್ತೆ: ಮೇಲ್ನೋಟಕ್ಕೆ ಕಂಡು ಬಂದ ಪ್ರಕರಣಗಳನ್ನ ತನಿಖೆ ಮಾಡಬಹುದು. ಸರಿಯಾದ ರೀತಿಯಲ್ಲಿ ತನಿಖೆ ಮಾಡಲು ಕಸ್ಟಡಿ ಅಗತ್ಯ ಎಂದು ನಟರಾಜ್ ರಿಂದ ವಾದ ಮಂಡನೆ
ಬೇರೆ ಆರೋಪಿಗಳಿಂದ ಬಂದ ಉತ್ತರವನ್ನ ಡಿಕೆಶಿ ಮುಂದೆ ಇಟ್ಟು ಉತ್ತರ ಪಡೆಯಬೇಕಿದೆ. ಅಕ್ರಮ ಹಣ ವರ್ಗಾವಣೆಯ ಕ್ಲಾಸಿಕ್ ಪ್ರಕರಣ ಇದು ಎಂದ ನಟರಾಜ್
ಡಿಕೆಶಿ ಪರ ವಕೀಲರಿಂದ ವಾದ ಮಂಡನೆ: ಡಿಕೆಶಿ ವಿಚಾರಣೆಗೆ ಇಡಿ ನೂರಾರು ಗಂಟೆ ಬಳಸಿಕೊಂಡಿದೆ. ಸತತ 12 ದಿನಗಳಿಂದ ವಿಚಾರಣೆ ನಡೆಸಲಾಗಿದೆ. ಇದು ಬೇಕಾದಷ್ಟಾಯಿತು. ಡಿಕೆಶಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರ ಬಿಪಿ ಹೆಚ್ಚಾಗಿದೆ. ಅತಿಸಾರದಿಂದ ಬಳಲುತ್ತಿದ್ದಾರೆ. ಅತೀವ ರಕ್ತದೊತ್ತಡ ಇದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡುತ್ತಿದ್ದಾರೆ.
ಡಿಕೆಶಿಗೆ ಅನಾರೋಗ್ಯ ಮುಂದಿಟ್ಟು ವಾದ:
ಡಿಕೆಶಿ ಅವರ ಆರೋಗ್ಯ ವಿಚಾರವನ್ನ ಇಡಿ ಕೋರ್ಟ್ ಗಮನಕ್ಕೆ ತರದೇ ಮುಚ್ಚಿಟ್ಟಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದು, ಅವರಿಗೆ ನೀವು ಜಾಮೀನು ನೀಡಿದರೂ ನೀಡದೇ ಇದ್ದರೂ ಅವರು ವಿಚಾರಣೆ ಎದುರಿಸುವ ಸ್ಥಿತಿಯಿಲ್ಲ. ಮತ್ತಷ್ಟು ವಿಚಾರಣೆ ನಡೆಸಿದರೆ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಬಹುದು. ಅವರು ತುರ್ತಾಗಿ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇದೆ. ಹೀಗಾಗಿ ಅವರಿಗೆ ಆಸ್ಪತ್ರೆಗೆ ದಾಖಲಾಗಲು ಅವಕಾಶ ನೀಡಬೇಕು ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದಾರೆ.
15 ದಿನ ವಿಚಾರಣೆಗೆ ಅವಕಾಶ ಇದೆ. ಆದರೆ ಅದನ್ನೇ ಮುಂದಿಟ್ಟುಕೊಂಡು ಆರೋಗ್ಯ ಕಡೆಗಣಿಸಿ ವಿಚಾರಣೆ ನಡೆಸುವ ಅಗತ್ಯ ಇಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ನ ಹಲವು ತೀರ್ಪುಗಳನ್ನ ಉಲ್ಲೇಖಿಸಿ ವಾದ ಮಂಡನೆ ಮಾಡಿದ ಅಭಿಷೇಕ ಮನು ಸಿಂಘ್ವಿ
ತಕ್ಷಣವೇ ಅವರಿಗೆ ಚಿಕಿತ್ಸೆಯ ಅಗತ್ಯತೆ ಇದೆ. ಮೊದಲು ಯಾವ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೋ ಅದರ ಬಗ್ಗೆ ಮೊದಲು ಇನ್ವೆಸ್ಟಿಗೇಷನ್ ಮಾಡಬೇಕು. ಆದರೆ ಇಡಿ ಮುಂದುವರಿದ ಕೇಸ್ಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದರು.
ಪ್ರಕರಣ ದಾಖಲಾಗಿರುವುದು ಆಗಸ್ಟ್ 2018 ರಲ್ಲಿ ಆದರೆ ಪಿಎಂಎಲ್ಎನ್ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, 2019ರಲ್ಲಿ. ಹೀಗಾಗಿ ಈಗಿನ ಪ್ರಕರಣ ಪಿಎಂಎಲ್ಎನ್ ವ್ಯಾಪ್ತಿಗೆ ಬರುವುದಿಲ್ಲ.
ಬಯಸದ ಉತ್ತರ ನೀಡದಿದ್ದರೆ ಕಸ್ಟಡಿಗೆ ಪಡೆಯಲು ಸಾಧ್ಯವಿಲ್ಲ:
ಎಲ್ಲ ಕಡೆ ಸಿಕ್ಕಿರುವುದು ಕೇವಲ 8.5 ಕೋಟಿ ಎಂದು ಇಡಿ ಹೇಳಿದೆ. ಆದರೆ ಈಗ ಪ್ರಶ್ನೆ ಇರುವುದು ಕೇವಲ 41 ಲಕ್ಷಕ್ಕೆ. ಆ ಬಗ್ಗೆ ಮಾತ್ರ ವಿಚಾರಣೆ ನಡೆಸಬೇಕು. ಅಕ್ರಮ ಇರೋದು 41ಲಕ್ಷಕ್ಕೆ ಮಾತ್ರ. ಇಲ್ಲಿ ಸಚಿನ್ ನಾರಾಯಣ್ ಹಾಗೂ ಆಂಜನೇಯ ಪ್ರತ್ಯೇಕವಾಗಿ ಐಟಿ ರಿಟರ್ನ್ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇವರು ಬೇರೆ ಬೇರೆ ಎಂದು ಸಿಂಘ್ವಿ ವಾದ ಮಂಡನೆ ಮಾಡುತ್ತಿದ್ದಾರೆ. ತನಿಖಾಧಿಕಾರಿ ಬಯಸಿದ ಉತ್ತರ ನೀಡದ ಕಾರಣಕ್ಕೆ ಆರೋಪಿಯನ್ನ ಮತ್ತಷ್ಟು ದಿನ ಕಸ್ಟಡಿಗೆ ನೀಡಬೇಕಾಗುತ್ತದೆ ಎಂದು ನಿರೀಕ್ಷೆ ಮಾಡಬಾರದು ಎಂದು ಅಭಿಷೇಕ ಮನು ಸಿಂಘ್ವಿ ವಾದ
ಡಿಕೆಶಿಗೆ 80 ವರ್ಷದ ತಾಯಿ ಇದಾರೆ ಎಂದು ದಯಾನ್ ಕೃಷ್ಣನ್ ನ್ಯಾಯಾಲಯದ ಗಮನಕ್ಕೆ ತಂದರು.
ಸೋಮವಾರದೊಳಗೆ ಡಿಕೆಶಿಗೆ ಜಾಮೀನು ಅರ್ಜಿಗೆ ನಿಮ್ಮ ಅಬ್ಜೆಕ್ಷನ್ ಇದ್ದರೆ ಉತ್ತರ ನೀಡುವಂತೆ ಇಡಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಆದೇಶ ಕಾಯ್ದಿರಿಸಿದ ನ್ಯಾಯಾಧೀಶ: ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ತಮ್ಮ ತೀರ್ಪು ಕಾಯ್ದಿರಿಸಿದ್ದಾರೆ.
ಐಶ್ವರ್ಯಾಗೆ ಇಡಿ ಫುಲ್ ಡ್ರಿಲ್; ಅತಿಸಾರ, ರಕ್ತದೊತ್ತಡ ಕಾರಣ ಆಸ್ಪತ್ರೆ ಸೇರಿದ ಡಿಕೆಶಿ
ಇಂದು ಬೆಳಗ್ಗೆಯೇ ಇಡಿ ಅಧಿಕಾರಿಗಳು ತುಘಲಕ್ ರೋಡ್ ಪೊಲೀಸ್ ಠಾಣೆಯಿಂದ ಇಡಿ ಕಚೇರಿಗೆ ಕರೆದೊಯ್ದಿದ್ದರು..
ಡಿಕೆಶಿ ಪುತ್ರಿ ಐಶ್ವರ್ಯ ಹೆಸರಲ್ಲಿ ಕೋಟ್ಯಂತರ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಗುರುವಾರ ಪುತ್ರಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಅಕ್ರಮ ಹಣ ವ್ಯವಹಾರದಲ್ಲಿ ಸಿಲುಕಿರುವ ಡಿಕೆಶಿ ಆಗಸ್ಟ್ 30ರಂದು ಇಡಿ ತನ್ನ ವಶಕ್ಕೆ ಪಡೆದಿತ್ತು. ವಿಚಾರಣೆ ವೇಳೆ ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎನ್ನುವ ಕಾರಣ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆಶಿಯನ್ನು ತನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ನಿನ್ನೆ ದಿನವಿಡಿ ಪುತ್ರಿ ಐಶ್ವರ್ಯ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು, ತಂದೆ - ಮಗಳನ್ನ ಮುಖಾಮುಖಿ ಕೂಡಿಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.