ಭೋಪಾಲ್: ತೀವ್ರ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಮಧ್ಯಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆರಾಯ ಅಬ್ಬರಿಸುತ್ತಿದ್ದು, ಕೆಲವು ಪ್ರದೇಶಗಳಲ್ಲಿ ನೆರೆಹಾವಳಿ ಉಂಟಾಗಿ, ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಜನರು ವಿಚಿತ್ರ ಆಚರಣೆಯನ್ನೂ ನಡೆಸಿದ್ದಾರೆ.
ಉತ್ತಮ ಮಳೆಗಾಗಿ ಕಳೆದ ಕೆಲ ತಿಂಗಳ ಹಿಂದೆ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥನೆ ನಡೆಸಿ ಕಪ್ಪೆ ಮದುವೆ ಮಾಡಿಸಿದ್ದ ಇಲ್ಲಿನ ಜನರು ಇದೀಗ ಅವುಗಳಿಗೆ ಡಿವೋರ್ಸ್ ಕೊಡಿಸಿದ್ದಾರೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್ನ ಇಂದ್ರಪುರಿ ದೇವಸ್ಥಾನದಲ್ಲಿ ಸಕಲ ಪೂಜಾ ಕೈಂಕರ್ಯ ನಡೆಸಿ ಅವುಗಳಿಗೆ ವಿಚ್ಚೇದನ ಕೊಡಿಸಲಾಯಿತು. ಈ ಕಾರ್ಯಕ್ರಮವನ್ನು ಅಲ್ಲಿನ ಓಂ ಶಿವ ಶಕ್ತಿ ಮಂಡಲ ಆಯೋಜನೆ ಮಾಡಿತ್ತು.
ಮಣ್ಣಿನಿಂದ ನಿರ್ಮಿಸಲಾಗಿದ್ದ ಗಂಡು ಮತ್ತು ಹೆಣ್ಣು ಕಪ್ಪೆಗಳಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಸಿದ್ರು. ಆದರೆ ಇದೀಗ ಅವುಗಳಿಗೆ ಎಲ್ಲ ರೀತಿಯ ಪೂಜೆ-ಪುನಸ್ಕಾರ ಮಾಡಿ ಡಿವೋರ್ಸ್ ಕೊಡಿಸಿದ್ದಾರೆ.
ಕಳೆದ ಜುಲೈ 19ರಂದು ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥನೆ ಮಾಡಿ ಇದೇ ಓಂ ಶಿವ ಶಕ್ತಿ ಮಂಡಲ ಕಪ್ಪೆಗಳ ವಿವಾಹ ಮಾಡಿದ್ದರು. ಇದೀಗ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವ ಕಾರಣ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ಹೀಗಾಗಿ ಕಪ್ಪೆಗಳಿಗೆ ಡಿವೋರ್ಸ್ ಕೊಡಿಸಲಾಗಿದೆ ಎಂದು ಹರಿಓಂ ತಿಳಿಸಿದ್ದಾರೆ. ಕಪ್ಪೆಗಳಿಗೆ ವಿಚ್ಚೇದನ ಕೊಡಿಸಿರುವುದರಿಂದ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಬಹುದು ಎಂಬ ಭರವಸೆ ಇವರದ್ದಾಗಿದೆ.