ಅಮರಾವತಿ (ಪಿಟಿಐ): ರಾಜ್ಯ ರಾಜಧಾನಿಯನ್ನು ಅಮರಾವತಿಯಿಂದ ಸ್ಥಳಾಂತರಿಸುವ ಉದ್ದೇಶವಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶವನ್ನು ಕೋರಿ ಎಂದು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ಸವಾಲು ಹಾಕಿದರು.
ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೊಸ ಜನಾದೇಶವನ್ನು ಗೆದ್ದರೆ ಶಾಶ್ವತವಾಗಿ ರಾಜಕೀಯವನ್ನು ತೊರೆಯುತ್ತೇನೆ. ಹೊಸ ಚುನಾವಣೆಗೆ ಹೋಗಲು ಸಿದ್ಧರಿಲ್ಲದಿದ್ದರೆ ರಾಜ್ಯ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಚಂದ್ರಬಾಬು ನಾಯ್ಡು ಗರಂ ಆಗಿ ಮಾತನಾಡಿದ್ದಾರೆ.
ವೇಲಗಪುಡಿ ಮತ್ತು ತುಲ್ಲೂರುಗಳಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಟಿಡಿಪಿ ಮುಖ್ಯಸ್ಥ, ಮುಖ್ಯಮಂತ್ರಿ ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಎಚ್ಚರಿಸಿದರು. ರಾಜ್ಯ ರಾಜಧಾನಿಯನ್ನು ಬದಲಾಯಿಸಲು ಮುಖ್ಯಮಂತ್ರಿಗೆ ಯಾವುದೇ ಹಕ್ಕಿಲ್ಲ. ಅಮರಾವತಿ ದೇವರ ರಾಜಧಾನಿ. ಆದರೆ ಈಗ ರಾಕ್ಷಸರು ಅದನ್ನು ನಾಶಮಾಡಲು ಇಳಿದಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
2014ರ ಡಿಸೆಂಬರ್‌ನಲ್ಲಿ ಜಾರಿಗೆ ತರಲಾದ ಎಪಿ ಕ್ಯಾಪಿಟಲ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ ಕಾಯ್ದೆಯನ್ನು ರದ್ದುಗೊಳಿಸುವ ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸಿದ ನಾಯ್ಡು, ಸರ್ಕಾರವು ಎಫ್‌ಎ ಜೊತೆ ಸಹಿ ಹಾಕಿದ ಒಪ್ಪಂದಗಳ ಭವಿಷ್ಯವೇನು? ಎಂದು ಅವರು ಪ್ರಶ್ನಿಸಿದರು.