ಹೈದರಾಬಾದ್ : ಕೊರೊನಾ ವೈರಸ್‌ನ ಚೀನಾ ದೇಶವೇ ಹುಟ್ಟು ಹಾಕಿ, ಕುತಂತ್ರದಿಂದ ಅದನ್ನು ಎಲ್ಲ ದೇಶಗಳಿಗೂ ಹರಡಿದೆ ಎಂದು ವಿಶ್ವದ ಬಹುತೇಕ ದೇಶಗಳು ಈಗ ನಂಬಿವೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಚೀನಾ ವಿರುದ್ಧ ಎಲ್ಲ ದೇಶಗಳ ಆಕ್ರೋಶ ಮುಗಿಲು ಮುಟ್ಟುತ್ತಿದೆ. ಜೊತೆಗೆ ಚೀನಾದ ಬೀಜಿಂಗ್ನಲ್ಲಿ ಮತ್ತೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದರೆ, ಈ ಎಲ್ಲದರ ಮಧ್ಯೆ ಚೀನಾ ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿರುವುದು ಏಕೆ? ಚೀನಾ ಆಡಳಿತ ನಿಜವಾಗಿಯೂ ಭಾರತದೊಂದಿಗೆ ಯುದ್ಧ ಮಾಡಲು ಉತ್ಸುಕವಾಗಿದೆಯೇ? ಅಥವಾ ಭಾರತ ವಿರುದ್ಧದ ಮಿಲಿಟರಿ ಸಂಘರ್ಷದ ಹಿಂದೆ ಬೇರೇನಾದರೂ ಕಾರಣಗಳಿವೆಯಾ?
ನಿಜ ಹೇಳಬೇಕೆಂದರೆ ಚೀನಾ ಕೇವಲ ಭಾರತ ಮಾತ್ರವಲ್ಲದೆ, ತನ್ನ ಗಡಿಯ ಇನ್ನೂ ಹಲವಾರು ರಾಷ್ಟ್ರಗಳೊಂದಿಗೆ ಜಗಳ ಮಾಡುತ್ತಿದೆ. ಥೈಲ್ಯಾಂಡ್, ಲಾವೋಸ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ಮುಂತಾದ ದೇಶಗಳಿಗೆ ಚೀನಾ ಸತತ ಕಿರುಕುಳ ನೀಡುತ್ತಿದೆ. ತನ್ನ ಕಡೆಯಿಂದ ಈ ದೇಶಗಳಿಗೆ ಹರಿಯುವ ನದಿಗಳಿಗೆ ಅಡ್ಡಲಾಗಿ ಡ್ಯಾಂ ಕಟ್ಟಿ ಇವಕ್ಕೆ ನೀರು ಸಿಗದಂತೆ ಮಾಡಿದೆ ಕುತಂತ್ರಿ ಚೀನಾ.
ಜಪಾನ್ಗೆ ಸೇರಿದ್ದ ಜನವಸತಿ ಇಲ್ಲದ ದ್ವೀಪಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿದ ಚೀನಾ ಈಗ ಈ ದ್ವೀಪಗಳು ಚೀನಾ ಗಣರಾಜ್ಯದ ಭಾಗವಾಗಿವೆ ಎನ್ನತೊಡಗಿದೆ. ತನ್ನ ನಿಯಂತ್ರಣದಲ್ಲಿರುವ ಸಮುದ್ರ ಗಡಿಯಲ್ಲಿ ಸಂಚರಿಸುವ ವಿಯೆಟ್ನಾಂ ಹಡಗುಗಳನ್ನು ಚೀನಾ ಮುಳುಗಿಸುತ್ತಿದೆ. ಇದೆಲ್ಲದರ ಜೊತೆಗೆ ತೈವಾನ್ ದೇಶವನ್ನು ಕಬಳಿಸಲು ಹೊಂಚು ಹಾಕಿ ಕುಳಿತಿದೆ ಡ್ರ್ಯಾಗನ್. ಹಾಂಗ್ ಕಾಂಗ್ನಲ್ಲಿ ಚೀನಾ ಪ್ರಭುತ್ವದ ವಿರುದ್ಧ ಭಾರಿ ಜನಹೋರಾಟ ನಡೆದಿದೆ. ಈ ಎಲ್ಲ ಪರಿಸ್ಥಿತಿಗಳ ಮಧ್ಯೆ ಚೀನಾ ಆಡಳಿತ ತಾಳ್ಮೆ ಕಳೆದುಕೊಂಡಂತೆ ವರ್ತಿಸುತ್ತಿರುವುದು ಗಮನಾರ್ಹ.
ಪ್ರಸ್ತುತ ಚೀನಾ ಆಂತರಿಕವಾಗಿ 1990ರ ನಂತರದ ಅತಿ ಕೆಟ್ಟ ಹಣಕಾಸು ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಜಿಡಿಪಿ ಬೆಳವಣಿಗೆ ದರ ಈ ವರ್ಷ 6.8ಕ್ಕೆ ಕುಸಿದಿದೆ. ಈ ಮಧ್ಯೆ ಅಮೆರಿಕದೊಂದಿಗಿನ ಟ್ರೇಡ್ ವಾರ್ನಿಂದಾಗಿ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಸುಧಾರಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿದ್ದು, ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಈ ಎಲ್ಲ ಕಾರಣಗಳಿಂದ ಚೀನಾ ಈ ವರ್ಷ ತನ್ನ ಆರ್ಥಿಕ ಬೆಳವಣಿಗೆಯ ಗುರಿಯನ್ನೇ ಹಾಕಿಕೊಂಡಿಲ್ಲ!
ಚೀನಾ ಸರ್ಕಾರದ ಮುಖವಾಣಿ ಪತ್ರಿಕೆಯಾಗಿರುವ ಪಿಎಲ್ಎ ಡೇಲಿ ಇತ್ತೀಚೆಗೆ ಪ್ರಕಟಿಸಿದ ಅಂಕಣವೊಂದರಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದೆ. ಚೀನಾದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಇದರಿಂದ ಸಾಮಾಜಿಕ ವ್ಯವಸ್ಥೆಯೂ ಏರುಪೇರಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ದೇಶದ ಜನತೆ ಬಂಡಾಯವೇಳುವ ಸಾಧ್ಯತೆಗಳಿವೆ ಎಂದು ಅಂಕಣದಲ್ಲಿ ಹೇಳಲಾಗಿದೆ. ಪ್ರಸ್ತುತ ಚೀನಾದಲ್ಲಿ 60 ಬಿಲಿಯನ್ಗೂ ಅಧಿಕ ಜನ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದು, ಇವರೆಲ್ಲ ತಿಂಗಳಿಗೆ ಕೇವಲ 140 ಡಾಲರ್ ಸಂಪಾದನೆಯಲ್ಲಿ ಬದುಕುತ್ತಿದ್ದಾರೆ.
ಇನ್ನು ಚೀನಾದಲ್ಲಿ ನಿರುದ್ಯೋಗ ಪ್ರಮಾಣ ಭಾರಿ ಹೆಚ್ಚಾಗುತ್ತಿದ್ದು, ಉದ್ಯೋಗವಿಲ್ಲದ ಯುವಜನತೆ ಆಕ್ರೋಶದಿಂದ ಕುದಿಯುತ್ತಿದ್ದಾರೆ. ದೇಶದ ವಿವಿಧ ಮಹಾನಗರಗಳಲ್ಲಿ ಸರ್ಕಾರ ಕಟ್ಟಿಸುತ್ತಿದ್ದ ಬೃಹತ್ ಮೂಲಸೌಕರ್ಯ ವ್ಯವಸ್ಥೆಗಳು ಬದಲಾದ ಪರಿಸ್ಥಿತಿಯಲ್ಲಿ ನಿರುಪಯುಕ್ತವಾಗಿವೆ. ಸರ್ಕಾರ ಇವುಗಳಿಗೆ ಹೂಡಿದ್ದ ಬಂಡವಾಳ ನೀರಲ್ಲಿ ಹೋಮ ಮಾಡಿದಂತಾಗಿದೆ.
ಒಟ್ಟಾರೆಯಾಗಿ ಚೀನಾದ ಆಂತರಿಕ ಪರಿಸ್ಥಿತಿ ಸ್ಫೋಟಕವಾಗಿದ್ದು ಸಾಮಾನ್ಯ ಜನತೆ, ಬುದ್ಧಿ ಜೀವಿಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸರಕಾರದ ವಿರುದ್ಧ ತಿರುಗಿ ಬೀಳುವ ಎಲ್ಲ ಲಕ್ಷಣಗಳಿವೆ. ಚೀನಾದ ಕಪಿಮುಷ್ಟಿಯಲ್ಲಿರುವ ಅಲ್ಲಿನ ಮಾಧ್ಯಮಗಳು ಇಂಥ ವರದಿಗಳನ್ನು ಪ್ರಕಟಿಸುವುದಿಲ್ಲವಾದ್ದರಿಂದ ಅಲ್ಲಿನ ಆಂತರಿಕ ಬೇಗುದಿ ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ ಎನ್ನಲಾಗಿದೆ. ಜನತೆಯೇ ಸರ್ಕಾರದ ವಿರುದ್ಧ ಬಂಡಾಯವೇಳದಂತೆ ಇಡೀ ದೇಶದ ಗಮನವನ್ನು ವಾಸ್ತವದಿಂದ ದೂರ ಸೆಳೆದು, ಭಾರತದೊಂದಿಗಿನ ಯುದ್ಧದ ಕಡೆಗೆ ಗಮನ ಹೊರಳಿಸಲು ಚೀನಾ ಭಾರತದ ವಿರುದ್ಧ ಆಕ್ರಮಣಕಾರಿ ಪ್ರವೃತ್ತಿಯನ್ನು ಅಳವಡಿಸಿಕೊಂಡಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.