ಗಾಜಿಯಾಬಾದ್(ಉತ್ತರ ಪ್ರದೇಶ): ತನ್ನ ದೈಹಿಕ ಅಂಗವೈಕಲ್ಯವನ್ನು ಮೆಟ್ಟಿನಿಂತ ಗಾಜಿಯಾಬಾದ್‌ನ ಮಹಿಳೆಯೊಬ್ಬರು ಕೊರೊನಾ ವಿರುದ್ಧದ ಹೋರಾಟಕ್ಕೆ ತಮ್ಮ ಕೈಲಾದಷ್ಟು ಕೊಡುಗೆ ನೀಡುವುದಾಗಿ ಹೇಳಿದ್ದಾರೆ.
ದೇಶದಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಹಾಯ ಮಾಡಲು ವಿಶೇಷ ಚೇತನ ಮಹಿಳೆ ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ ಅಗತ್ಯವಿರುವವರಿಗೆ ಉಚಿತವಾಗಿ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ. 14ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕೈ ಕಳೆದುಕೊಂಡ ಮೂರ್ತಿ ದೇವಿಗೆ ಅಂಗವೈಕಲ್ಯವು ಎಂದಿಗೂ ಅಡ್ಡಿಯಾಗಿಲ್ಲ.
ತನ್ನ ಜೀವನಕ್ಕಾಗಿ ಬಟ್ಟೆ ಹೊಲೆಯುವ ಕೆಲಸ ಮಾಡುತ್ತಿರುವ ಮಹಿಳೆ, ಮಾಸ್ಕ್ಗಳನ್ನೂ ಸಿದ್ಧಪಡಿಸಿ ವಿತರಿಸುತ್ತಿದ್ದಾಳೆ. ಈ ಬಗ್ಗೆ ಮಾತನಾಡಿದ ಮೂರ್ತಿ ದೇವಿ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಮಗುವನ್ನು ಎತ್ತಿಕೊಂಡು ಮಾಸ್ಕ್ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ನೋಡಿದೆ. ನಮಗಾಗಿ ಹೋರಾಟ ನಡೆಸುತ್ತಿರುವ ಅವರಿಗೆ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ಬೇಸರವಾಯಿತು. ಹೀಗಾಗಿ ಮಾಸ್ಕ್ ತಯಾರಿಸಿ ವಿತರಿಸಲು ತೀರ್ಮಾನಿಸಿದೆ ಎಂದಿದ್ದಾರೆ.
ಕೇವಲ ಮಾಸ್ಕ್ಗಳನ್ನು ವಿತರಿಸುವುದು ಮಾತ್ರವಲ್ಲದೆ, ಪ್ರತಿಯೊಬ್ಬರಿಗೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಲಾಕ್ಡೌನ್ ಸಮಯದಲ್ಲಿ ಮನೆಯಿಂದ ಹೊರಬಾರದಂತೆ ಜನರಿಗೆ ಮನವಿ ಮಾಡುತ್ತಿದ್ದೇನೆ ಎಂದು ಮೂರ್ತಿ ದೇವಿ ಹೇಳಿದ್ದಾರೆ.