ನವದೆಹಲಿ: ದೇಶದ ಆರ್ಥಿಕತೆಯಲ್ಲಿ ನಗದು ಪ್ರಮಾಣ ಕಡಿಮೆ ಮಾಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಬಹು ದಿನಗಳ ಕನಸು. ಆ ದಿಸೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮೋದಿ ಹಲವು ದಿಟ್ಟ ಕ್ರಮಗಳನ್ನ ಕೈಗೊಂಡಿದ್ದಾರೆ.
ಡಿಜಿಟಲ್ ಮನಿ ಬಳಕೆ ಹಾಗೂ ವ್ಯವಹಾರಕ್ಕೆ ಉತ್ತೇಜನ ನೀಡಲು ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಹಲವು ಪೂರಕ ಕ್ರಮಗಳನ್ನ ಕೈಗೊಳ್ಳಲಾಗಿದೆ.
ಲೆಸ್ ಕ್ಯಾಶ್ ಇಕಾನಮಿ ( ಕಡಿಮೆ ಹಣದ ಬಳಕೆ) ಉತ್ತೇಜಿಸಲು ವಾರ್ಷಿಕ 1 ಕೋಟಿಗಿಂತ ಹೆಚ್ಚಿನ ಹಣವನ್ನ ಬ್ಯಾಂಕ್ನಿಂದ ಡ್ರಾ ಮಾಡುವವರ ಮೇಲೆ ಶೇ 2ರಷ್ಟು ಲೆವಿ ( ಟಿಡಿಎಸ್) ಹಾಕುವ ಘೋಷಣೆ ಮಾಡಿದ್ದಾರೆ.
ಇನ್ನು ಭೀಮ್, ಯುಪಿಐ, ಯುಪಿಐ ಕ್ಯೂ ಆರ್ ಕೋಡ್, ಆಧಾರ್ ಪೇ, ಡೆಬಿಟ್ ಕಾರ್ಡ್, ನೆಫ್ಟ್, ಆರ್ಟಿಜಿಎಸ್ಗಳ ಮೇಲಿನ ನಿರ್ವಹಣಾ ಶುಲ್ಕ ಕಡಿಮೆ ಆಗಲಿದೆ.
ಸಣ್ಣ ಉದ್ಯಮಿಗಳು ಸುಮಾರು ವಾರ್ಷಿಕ 50 ಕೋಟಿ ರೂ ವರೆಗಿನ ಹಣ ವರ್ಗಾವಣೆಯನ್ನ ಕಡಿಮೆ ಶುಲ್ಕದಲ್ಲಿ ನಿರ್ವಹಿಸಬಹುದು. ಈ ಸಂಬಂಧ ಈಗಿರುವ ಕಾನೂನಿಗೆ ಅಗತ್ಯ ಬದಲಾವಣೆ ತರಲು ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ನಿರ್ಧರಿಸಿದೆ.