ಛತ್ತೀಸ್ಗಢ: ವಿಘ್ನ ನಿವಾರಕ ಗಣೇಶನಿಗೆ ಹತ್ತು ಹಲವು ಹೆಸರುಗಳಿವೆ. ಈ ಹೆಸರುಗಳ ಪೈಕಿ ಏಕದಂತ ಅನ್ನೋ ಹೆಸರಿಗೆ ವಿಶೇಷ ಮಹತ್ವವಿದೆ. ಈ ಹೆಸರಿನ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. ಗಣೇಶನಿಗೆ ಒಂದೇ ದಂತವಿದೆ ಅನ್ನೋದು ಕೂಡಾ ಕೆಲವರಿಗೆ ಗೊತ್ತಿರಲ್ಲ. ಈ ವಿಶೇಷತೆಗೆ ಸಂಬಂಧಿಸಿದಂತೆ ಗಣೇಶನ ಒಂದು ಸುಂದರ ತಾಣವಿದೆ. ಅದುವೇ ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯ ಡೋಲ್‌ಕಲ್ ಗಣೇಶ.
ಛತ್ತೀಸ್ಗಢದ ದಂತೇವಾಡ ಜಿಲ್ಲೆಯಲ್ಲಿ ಗಣೇಶನ ಅಪರೂಪದ ಪ್ರತಿಮೆ ಇದೆ. ಇದು ಡೋಲ್‌ಕಲ್ ಬೆಟ್ಟ ಶ್ರೇಣಿಯ ದಂತೇವಾಡದಿಂದ 30 ಕಿಲೋಮೀಟರ್ ದೂರದಲ್ಲಿದೆ. ಸಂಗೀತ ಪರಿಕರವಾದ ಡೋಲಿನ ಆಕಾರದಲ್ಲಿರುವ ಕಾರಣಕ್ಕೆ ಇದನ್ನು ಡೋಲ್‌ಕಲ್ ಎಂದೇ ಕರೆಯಲಾಗಿದೆ.
ಸುತ್ತಲೂ ದಟ್ಟ ಅಭಯಾರಣ್ಯ. ಎಲ್ಲಿ ನೋಡಿದರೂ ಎತ್ತರದ ಕಣಿವೆಗಳು ಹಾಗೂ ಅಷ್ಚೇ ಎತ್ತರದ ಹಿರಿದಾದ ಮರಗಳು. ಹಚ್ಚ ಹಸಿರಿನ ದಟ್ಟ ಕಾನನದ ನಟ್ಟ ನಡುವಿನ ಸುಮಾರು 2,500 ಅಡಿ ಎತ್ತರದ ಬಂಡೆಯ ಮೇಲೆ ವಿರಾಜಮಾನವಾಗಿದ್ದಾನೆ ಪಾರ್ವತಿಸುತ.
ವಿಶೇಷವೆಂದರೆ, ಈ ಗಣೇಶನ ಅಪರೂಪದ ಪ್ರತಿಮೆಯನ್ನು ಆರ್ಡನೆನ್ಸ್ ರೂಪದಲ್ಲಿ ಕೆತ್ತಲಾಗಿದೆ. ಬಪ್ಪಾ ಇಲ್ಲಿ ಲಲಿತಾಸನ ಭಂಗಿಯಲ್ಲಿ ಕುಳಿತು ಕಂಗೊಳಿಸುತ್ತಿದ್ದಾನೆ. ಈ ರೀತಿಯ ಗಣೇಶ ಪ್ರತಿಮೆಯನ್ನು ಬೇರೆಲ್ಲಿಯೂ ನಾವು ನೋಡಲು ಸಾಧ್ಯವಿಲ್ಲ. ಇಲ್ಲಿಯೇ ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ ನಡೆಯಿತು ಅನ್ನೋದು ಪೌರಾಣಿಕ ವಿಚಾರ. ಇಬ್ಬರ ನಡುವಿನ ಕಾಳಗದ ವೇಳೆ ಗಣೇಶನ ಒಂದು ಹಲ್ಲು ಮುರಿಯಿತಂತೆ. ಇದರ ನಂತರವೇ ಗಣಪತಿ ಬಪ್ಪನನ್ನು 'ಏಕದಂತ' ಎಂದು ಕರೆಯಲಾಯಿತು ಎಂದು ಹೇಳುತ್ತದೆ ಪುರಾಣ.
ಗಣೇಶನನ್ನು ಏಕದಂತ ಎನ್ನುವುದಕ್ಕೆ ಉತ್ತರ ಈ ಪವಿತ್ರವಾದ ತಾಣದಲ್ಲಿದೆ. ಯಾಕಂದ್ರೆ ಪರಶುರಾಮನ ಕೊಡಲಿಯಿಂದ ಗಣೇಶನ ದಂತ ತುಂಡಾದ ಸ್ಥಳವಿದು ಎನ್ನಲಾಗುತ್ತದೆ.
ಹೌದು, ಶಿವನನ್ನು ಭೇಟಿಯಾಗಲು ಕೈಲಾಸಕ್ಕೆ ಬಂದ ಪರಶುರಾಮನನ್ನು, ಅಲ್ಲಿ ಕಾವಲು ಕಾಯುತ್ತಿದ್ದ ವಿನಾಯಕ ತಡೆಯುತ್ತಾನೆ. ಬಳಿಕ ತನ್ನ ಸೊಂಡಿಲಿನಿಂದ ಸುತ್ತಿ ಭೂಲೋಕಕ್ಕೆ ತಂದು ಈ ಬೆಟ್ಟದ ಮೇಲೆ ತಂದು ಹಾಕಿದನು ಎನ್ನಲಾಗುತ್ತದೆ. ಬಳಿಕ ಎಚ್ಚರಗೊಂಡ ಪರಶುರಾಮನು, ಕೋಪದಿಂದ ತನ್ನ ಕೊಡಲಿಯಿಂದ ಗಣೇಶನ ಒಂದು ದಂತವನ್ನು ತುಂಡರಿಸುತ್ತಾನೆ. ಅದೇ ಸ್ಥಳ ಇದು ಎಂದು ಹೇಳುತ್ತವೆ ಪುರಾಣ ಕಥೆಗಳು.
ಈ ಒಂದು ಘಟನೆಯ ನೆನಪಿಗಾಗಿ ಇಲ್ಲಿನ ಚಿಂತಕ ನಾಗವಂಶಜರು, ಗಣೇಶನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರಂತೆ. ಅಲ್ಲದೆ ಈ ಪರ್ವತದ ಕೆಳಗಿನ ಊರಿನ ಹೆಸರನ್ನು ಪಾರಸ್ಪಾಲ್ ಎಂದು ಹೆಸರಿಸಲಾಗಿದೆ. ಇದರ ಪಕ್ಕದಲ್ಲಿ ಪಹರೇದಾರ್ ಎನ್ನುವ ಊರಿದೆ. ಇಲ್ಲಿ ಗಣೇಶನನ್ನು ಊರಿನ ರಕ್ಷಕ ಎಂದು ನಂಬಲಾಗಿದೆ.
ಗ್ರಾನೈಟ್‌ನಿಂದ ನಿರ್ಮಿತವಾಗಿರುವ ಮೂರಡಿ ಎತ್ತರದ ಗಣೇಶನ ವಿಗ್ರಹ 9ನೇ ಶತಮಾನದ್ದು ಎನ್ನಲಾಗಿದೆ. ಗಣೇಶನ ಮೂರ್ತಿಯ ಹೊಟ್ಟೆಯ ಬಳಿ ಇರುವ ಹಾವು ನಾಗವಂಶಜರ ಸಂಕೇತವಾಗಿದ್ದು, ಬಯಲಿನಲ್ಲಿ ಕುಳಿತ ವಿಗ್ರಹಕ್ಕೆ ಆಲಯವೇ ಇಲ್ಲ.
ಡೋಲ್‌ಕಲ್ ಶಿಖರದ ಮೇಲೆ ಸ್ಥಾಪಿಸಲಾದ ಪ್ರತಿಮೆಯ ಮೇಲೆ, ಯಾವುದೇ ಗುಮ್ಮಟವನ್ನು ನಿರ್ಮಿಸಲಾಗಿಲ್ಲ ಎಂಬುದೊಂದು ವಿಶಿಷ್ಟ ವಿಷಯ. ಇದರ ಜೊತೆಗೆ ಮುಖ್ಯವಾದ ವಿಚಾರವೆಂದರೆ ಈ ಪ್ರತಿಮೆ ಇಲ್ಲಿಗೆ ಹೇಗೆ ಬಂತು ಎನ್ನುವುದು ಯಾರಿಗೂ ಗೊತ್ತಿಲ್ಲದ ಸಂಗತಿಯೂ ಹೌದು. ಗಣೇಶನ ಮೂರ್ತಿ ನೋಡುತ್ತಿದ್ದಂತೆ ಪ್ರವಾಸಿಗರ ಆಯಾಸವೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆಯಿದೆ.
ನೈಸರ್ಗಿಕವಾಗಿ ಇರುವ ಬೆಟ್ಟದ ಮೇಲಿರುವ ಈ ಪ್ರತಿಮೆಯನ್ನು ನೋಡಲು, 2,500 ಅಡಿ ಎತ್ತರದ ಬೆಟ್ಟವನ್ನು ಏರಲು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಯಾಣಿಸಬೇಕು. ಅತ್ಯುನ್ನತ ಶಿಖರದಲ್ಲಿರುವ ಗಣೇಶನ ದರ್ಶನ ಪಡೆಯುವುದು ಸುಲಭದ ಮಾತಲ್ಲ. ದುರ್ಗಮ ಬೆಟ್ಟಗಳು ಮತ್ತು ಕಂದಕಗಳನ್ನು ದಾಟಿ ಇಲ್ಲಿಗೆ ಹೋಗಬೇಕಾಗುತ್ತದೆ.