ವಾರಣಾಸಿ: ಮಾಘ ಪೂರ್ಣಿಮೆಯ ಅಂಗವಾಗಿ ವಾರಣಾಸಿಯಲ್ಲಿ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದರು. ಇಂದು ಮಾಘ ಪೂರ್ಣಿಮೆ. ಉತ್ತರ ಭಾರತದಲ್ಲಿ ಮಾಘಿ ಪೂರ್ಣಿಮೆ ವಿಶಿಷ್ಟವಾದ ಆಚರಣೆ. ಭಗವಾನ್ ವಿಷ್ಣು ಸ್ವತಃ ಮಾಘಿ ಪೂರ್ಣಿಮೆ ದಿನದಂದು ಗಂಗೆಯಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ಗಂಗೆಯಲ್ಲಿ ಮಿಂದೆದ್ದು ದೇವರು ಸದ್ಗುಣಗಳನ್ನು ಪ್ರಾಪ್ತಿ ಮಾಡುವಂತೆ ಬೇಡಿಕೊಳ್ಳುತ್ತಾರೆ.
ವಾಸ್ತವವಾಗಿ ಮಾಘ ಮಾಸದ ಕೊನೆಯ ಹುಣ್ಣಿಮೆಯಂದು ಗಂಗಾ ಸ್ನಾನ ಮಾಡುವುದರಿಂದ, ಇಡೀ ಮಾಘ ತಿಂಗಳ ಸದ್ಗುಣವನ್ನು ಪಡೆಯಬಹುದು ಎಂಬುದು ನಂಬಿಕೆ. ಚಂದ್ರನು ಕರ್ಕಾಟಕ ರಾಶಿಗೆ ಹಾಗೂ ಸೂರ್ಯನು ಮಕರ ರಾಶಿ ಪ್ರವೇಶಿಸಿದಾಗ ಮಾಘ ಪೂರ್ಣಿಮೆ ರೂಪುಗೊಳ್ಳುತ್ತದೆ. ಈ ಹುಣ್ಣಿಮೆಯನ್ನು ಪುಣ್ಯ ಯೋಗ ಎಂದೂ ಕರೆಯುತ್ತಾರೆ.
ಈ ಪುಣ್ಯ ದಿನದಂದು ದಶಾವಮೇಧ್ ಘಾಟ್, ಪ್ರಯಾಗ್ ಘಾಟ್ ಹಾಗೂ ಅಲಹಾಬಾದ್ನ ಕಲ್ಪವಾಸ್ಗೆ ಜನರು ಭೇಟಿ ನೀಡಿ ಅಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುತ್ತಾರೆ. ಕಲ್ಪವಾಸ್ಗೆ ತೆರಳಲು ಅಸಾಧ್ಯವಾದವರು ತಮ್ಮ ನಗರಗಳಲ್ಲೇ ಇರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ನದಿಗಳಲ್ಲಿ ಸ್ನಾನ ಮಾಡುತ್ತಾರೆ.