ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ಕುರಿತ ಬಿಜೆಪಿ-ಶಿವಸೇನಾ ನಡುವಿನ ಬಿಕ್ಕಟ್ಟು ಮುಂದುವರೆದಿರುವ ನಡುವೆ ಇದೀಗ ಹಂಗಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.
ರಾಜಭವನಕ್ಕೆ ತೆರಳಿದ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ದೇವೇಂದ್ರ ಫಡ್ನವೀಸ್, ಐದು ವರ್ಷಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದೇನೆ. ಬರ ನಿರ್ವಹಣೆ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಚುನಾವಣೆಗೂ ಮುನ್ನ ಅಧಿಕಾರ ಹಂಚಿಕೆ ವಿಚಾರವಾಗಿ ಶಿವಸೇನೆ ಜೊತೆ ಯಾವುದೇ ರೀತಿಯಲ್ಲೂ ಒಪ್ಪಂದ ನಡೆದಿಲ್ಲ. ಜೊತೆಗೆ ಸರ್ಕಾರ ರಚನೆ ಸಂಬಂಧ ಶಿವಸೇನೆ ಎನ್‌ಸಿಪಿ ಜೊತೆ ಮಾತುಕತೆ ನಡೆಸಿದ್ದು ನಮಗೆ ಅಸಮಾಧಾನ ತರಿಸಿದೆ ಎಂದು ಅವರು ತಿಳಿಸಿದ್ರು.
ಶಿವಸೇನೆ ನಿಲುವೇನು?
ಚುನಾವಣಾ ಪೂರ್ವದಲ್ಲಿ ಬಿಜೆಪಿ-ಶಿವಸೇನೆ ನಡುವೆ 50:50 ಅಧಿಕಾರ ಹಂಚಿಕೆ ಸೂತ್ರ ನಡೆದಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ತನಗೆ ನೀಡಬೇಕು ಎಂದು ಶಿವಸೇನೆ ಪಟ್ಟು ಹಿಡಿದು ಕೂತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆ ವಿಚಾರ ದಿನ ಕಳೆದಂತೆ ಕಗ್ಗಂಟಾಗುತ್ತಾ ಹೋಗಿದೆ. ಫಲಿತಾಂಶ ಹೊರಬಿದ್ದು 14 ದಿನಗಳ ನಂತರವೂ ಯಾವುದೇ ಉಭಯ ಪಕ್ಷಗಳು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲೇ ಇಲ್ಲ.
288 ವಿಧಾನಸಭಾ ಕ್ಷೇತ್ರ ಹೊಂದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ 105, ಶಿವಸೇನೆ 56, ಎನ್‌ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ. ಸದ್ಯದ ವಿಧಾನಸಭೆ ಅವಧಿ ನಾಳೆ ಮುಕ್ತಾಯಗೊಳ್ಳುತ್ತಿರುವ ಕಾರಣ, ಇಂದು ಪಢ್ನವೀಸ್ ರಾಜೀನಾಮೆ ನೀಡಿದ್ದು, ಇಲ್ಲಿಯವರೆಗೆ ಯಾವುದೇ ಪಕ್ಷ ಅಥವಾ ಮೈತ್ರಿ ಪಕ್ಷಗಳು ಸರ್ಕಾರ ರಚನೆಯ ಬಗ್ಗೆ ಹಕ್ಕು ಮಂಡನೆ ಮಾಡಿಲ್ಲ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.