ಮುಂಬೈ: ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಸಹ ಕೆಲ ಶ್ರೀಮಂತ ವ್ಯಕ್ತಿಗಳು ಆಸ್ಪತ್ರೆಯ ಐಸಿಯು ಬೆಡ್ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನದ ಹಿಂದೆ ಅಹ್ಮದ್‌ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ವಿಳಂಬವಾಗಿ ಪುಣೆ ಮೂಲದ ಪತ್ರಕರ್ತ ಕೊರೊನಾಗೆ ಬಲಿಯಾಗಿದ್ದರು. ಈ ವಿಚಾರವಾಗಿ ಸಚಿವರು ಮಾತನಾಡಿದ್ದಾರೆ. "ದುರದೃಷ್ಟವಶಾತ್ ಕೊರೊನಾ ವೈರಸ್ಗೆ ಚಿಕಿತ್ಸೆ ಪಡೆಯಲು ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದ ಕಾರಣ ಪತ್ರಕರ್ತ ಪಾಂಡುರಂಗ್ ರಾಯ್ಕರ್ ಪುಣೆಯಲ್ಲಿ ನಿಧನರಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಯಲಿದೆ. ಈ ರೀತಿ ಮುಂದೆ ನಡೆಯದಂತೆ ಎಚ್ಚರ ವಹಿಸಲಾಗುವುದು. ರಾಜ್ಯದ ಎಲ್ಲಾ ಆಯುಕ್ತರಿಗೆ ಆಂಬುಲೆನ್ಸ್ ಒದಗಿಸಲು ಸೂಚನೆ ನೀಡಲಾಗಿದೆ " ಎಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟು ಮುಂದುವರೆದಿದೆ ಮತ್ತು ಈ ಸಮಯದಲ್ಲಿ ಎಲ್ಲರೂ ಸಹಕರಿಸಬೇಕು. ಮಾರಣಾಂತಿಕ ವೈರಸ್ ಯಾರ ಮೇಲೂ ಪರಿಣಾಮ ಬೀರಬಹುದು. ಅದು ಮಂತ್ರಿಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ. ಕೆಲವು ಶ್ರೀಮಂತರು ಐಸಿಯುನಲ್ಲಿ ಒತ್ತಾಯಪೂರ್ವಕವಾಗಿ ದಾಖಲಾಗಿದ್ದಾರೆ. ಈ ಕಾರಣದಿಂದಾಗಿ ತೀವ್ರ ಅಗತ್ಯವಿರುವ ವ್ಯಕ್ತಿಗೆ ಹಾಸಿಗೆ ಸಿಗುವುದಿಲ್ಲ. ಆದಾಗ್ಯೂ ಪುಣೆಯ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಟೋಪೆ ಹೇಳಿದ್ದಾರೆ.