ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ವಿಡಿಯೋ ಸರಣಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ನೋಟು ಅಮಾನ್ಯೀಕರಣದಿಂದಾಗಿ ಆರ್ಥಿಕ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
"ನೋಟು ಅಮಾನ್ಯೀಕರಣವು ಭಾರತದ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲಿನ ದಾಳಿಯಾಗಿದೆ. ಇದು ಭಾರತದ ಅಸಂಘಟಿತ ವಲಯದ ಆರ್ಥಿಕತೆ ಮೇಲಿನ ದಾಳಿಯಾಗಿದೆ" ಎಂದು ರಾಹುಲ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋ ಸರಣಿಯ ಎರಡನೇ ಭಾಗವನ್ನು "ನೋಟ್ ಬಂದಿ ಕಿ ಬಾತ್" ಎಂಬ ಹೆಸರಿನಿಂದ ರಾಹುಲ್ ಬಿಡುಗಡೆ ಮಾಡಿದ್ದಾರೆ.
ಅದರಲ್ಲಿ ಅವರು ಭಾರತೀಯ ಆರ್ಥಿಕತೆಯ ಮೇಲೆ ನೋಟು ಅಮಾನ್ಯೀಕರಣದ ಪರಿಣಾಮದ ಕುರಿತು ಮಾತನಾಡಿದ್ದಾರೆ. "ಮೋದಿ ಜೀ ಅವರ 'ನಗದು ರಹಿತ ಭಾರತ' ಮೂಲತಃ 'ರೈತ-ಕಾರ್ಮಿಕ-ಸಣ್ಣ ಉದ್ಯಮಿ-ರಹಿತ' ಭಾರತ" ಎಂದು ಅವರು ಟ್ವೀಟ್ ಮಾಡಿದ್ದಾರೆ.
"ನೋಟು ಅಮಾನ್ಯೀಕರಣವು ಭಾರತದ ಅಸಂಘಟಿತ ವಲಯದ ಆರ್ಥಿಕತೆ ಮೇಲಿನ ದಾಳಿಯಾಗಿದ್ದು, ಇಡೀ ದೇಶವು ಅದರ ವಿರುದ್ಧ ಒಟ್ಟಾಗಿ ಹೋರಾಡಬೇಕು" ಎಂದು ಕರೆ ನೀಡಿದ್ದಾರೆ.