ನವದೆಹಲಿ: ಜನವರಿ 5 ರಂದು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾತನಾಡಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಉಪಕುಲಪತಿ ಮಾಮಿಡಾಲಾ ಜಗದೇಶ್ ಕುಮಾರ್, ತಮ್ಮ ರಾಜೀನಾಮೆಯ ಬೇಡಿಕೆಗಳನ್ನು ಯಾವುದೇ 'ಮೌಲ್ಯ' ಹೊಂದಿಲ್ಲ ಹಾಗೂ ಸಂಸ್ಥೆಯ ಸುಧಾರಣೆಗಳತ್ತ ಗಮನಹರಿಸಿರುವುದಾಗಿ ತಿಳಿಸಿದ್ದಾರೆ.
ಈಟಿವಿ ಭಾರತ್ ಜೊತೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗದವರು ತಮ್ಮ ಪರವಾಗಿದ್ದಾರೆ. ಒಂದು ಸಣ್ಣ ಗುಂಪು ಮಾತ್ರ ವಿಶ್ವವಿದ್ಯಾಲಯಕ್ಕೆ ಅಪಖ್ಯಾತಿ ತರಲು ಬಯಸಿದೆ ಎಂದು ಹೇಳಿದರು.
'ಆಡಳಿತ ಸರಿಯಾಗಿದೆ, ವಿದ್ಯಾರ್ಥಿಗಳು ನಮ್ಮನ್ನು ವಿರೋಧಿಸುತ್ತಿರುವುದು ತಪ್ಪು'
ಶುಲ್ಕ ಹೆಚ್ಚಳ ಕುರಿತು ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿಗಳು ನಿರಂತರ ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ಕುಮಾರ್, ನೀರು ಮತ್ತು ವಿದ್ಯುತ್ ನಂತಹ ಸೇವೆಗಳು ವಿವಿಯ ಆಂತರಿಕ ವೆಚ್ಚದ ಅಡಿಯಲ್ಲಿ ಬರುತ್ತವೆ ಎಂದು ಯುಜಿಸಿ ಹೇಳಿದೆ. ನಾವು ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಬಳಿಕ ಯುಜಿಸಿಗೆ ಖರ್ಚುಗಳನ್ನು ಭರಿಸಲು ಎಂಎಚ್‌ಆರ್‌ಡಿ ಹೇಳಿದೆ. ನಾವೀಗ ಸೇವಾ ಶುಲ್ಕಗಳನ್ನು ಕಡಿಮೆ ಮಾಡಿದ್ದೇವೆ. ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಇದ್ದ 300 ರೂ. ಹಾಸ್ಟೆಲ್ ಶುಲ್ಕವನ್ನು ಈಗ 150 ರೂ.ಗೆ ಇಳಿಸಿದ್ದೇವೆ. ವಿವಿಯ ಆರ್ಥಿಕ ಪರಿಸ್ಥಿತಿಯ ಕುರಿತು ನಾವು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದೇವೆ. ಆದರೂ ಸಹ ಕೆಲ ವಿದ್ಯಾರ್ಥಿಗಳು ನಮ್ಮನ್ನ ವಿರೋಧಿಸುತ್ತಿರುವುದು ತಪ್ಪು ಎಂದರು.
'ನನ್ನ ಸೇವೆಯನ್ನು ಮುಂದುವರಿಸುತ್ತೇನೆ'
ಜೆಎನ್‌ಯು ಸುದ್ದಿವಾಹಿನಿಗಳ ಕೇಂದ್ರ ಬಿಂದುವಾಗುವುದು ಇಷ್ಟವಿಲ್ಲ. ವಿಶ್ವದ ಅಗ್ರ 100 ಸಂಸ್ಥೆಗಳಲ್ಲಿ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಸ್ಥಾನ ದೊರಕುವಂತೆ ಮಾಡುವುದು ನನ್ನ ಕನಸಾಗಿದ್ದು, ಈ ನಿಟ್ಟಿನಲ್ಲಿ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ನಾನು ರಾಜೀನಾಮೆ ನೀಡಬೇಕೆಂದು ಆಗ್ರಹಿಸುವುದು ಅವರ ಹಕ್ಕಾಗಿರಬಹುದು, ಆದರೆ ಇದಕ್ಕೆ ಯಾವುದೇ ಬೆಲೆಯಿಲ್ಲ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವ ವಿಚಾರವನ್ನು ತಳ್ಳಿಹಾಕಿದರು.
'ಮುಸುಕುಧಾರಿಗಳು ಡೇಟಾ ಕೇಂದ್ರಗಳನ್ನ ಧ್ವಂಸ ಮಾಡಿದರು'
ಜನವರಿ 3 ರಂದು ಮುಸುಕು ಧರಿಸಿ ಬಂದ ಕೆಲವರು ಡೇಟಾ ಕೇಂದ್ರಗಳನ್ನ ಧ್ವಂಸ ಮಾಡಿದರು. ದೆಹಲಿ ಪೊಲೀಸರ ತನಿಖೆಯ ಬಳಿಕವೇ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕುಮಾರ್ ಆರೋಪಿಸಿದ್ದಾರೆ.
ಇನ್ನು ಜನವರಿ 5 ರಂದು ನಡೆದ ಹಿಂಸಾಚಾರದ ವೇಳೆ ತಕ್ಷಣವೇ ಪೊಲೀಸರನ್ನು ಕರೆಸಿ ಗಲಭೆಯನ್ನು ನಿಲ್ಲಿಸುವಲ್ಲಿ ಉಪಕುಲಪತಿಗಳು ವಿಫಲವಾಗಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವಿವಿ ಆವರಣದಲ್ಲಿ ಏನೋ ನಡೆಯುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರನ್ನು ಕರೆಸಲು ಆಗುವುದಿಲ್ಲ. ಮೊದಲು ನಮ್ಮಿಂದ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗತ್ತಾ ಅಂತಾ ನೋಡಬೇಕು. ಯಾವಾಗ ಪರಿಸ್ಥಿತಿ ನಿಯಂತ್ರಣ ತಪ್ಪಿತೋ ಆಗ ಕೂಡಲೇ ನಾನು ಡಿಸಿಪಿ ಹಾಗೂ ಕಮಿಷನರ್ಗೆ ಮಾಹಿತಿ ನೀಡಿದ್ದೇನೆ ಎಂದರು.