ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ಕೂಡ ದಿನದಿಂದ ದಿನಕ್ಕೆ ಅತಿ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗ್ತಿದ್ದಾರೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಸೋಂಕಿತರು ಗುಣಮುಖರಾಗುತ್ತಿದ್ದಾರೆ.
ದೆಹಲಿಯಲ್ಲಿ ಇಲ್ಲಿಯವರೆಗೆ ಬರೋಬ್ಬರಿ 1,28,398 ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 1,10,931 ಜನರು ಮಹಾಮಾರಿಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಸದ್ಯ ಕೇವಲ 13,681 ಸಕ್ರಿಯ ಪ್ರಕರಣಗಳಿವೆ. ಉಳಿದಂತೆ 3,777 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ದಾಖಲೆಯ ಶೇ. 87ರಷ್ಟು ಜನರು ಗುಣಮುಖರಾಗಿದ್ದು, ಕೇವಲ ಶೇ. 9.77 ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆ ಕೂಡ ಬರೋಬ್ಬರಿ 2,137 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಪ್ರತಿ ದಿನ ಕೋವಿಡ್ ಸೋಂಕಿತ ಪ್ರಕರಣ ದೃಢಗೊಳ್ಳುತ್ತಿರುವ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇಂದು 1,142 ಕೇಸ್ ದಾಖಲಾಗಿವೆ. ಜತೆಗೆ ಕಳೆದ 24 ಗಂಟೆಯಲ್ಲಿ 20,500 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಇಲ್ಲಿಯವರೆಗೆ 9.29 ಲಕ್ಷ ಜನರ ಟೆಸ್ಟ್ ಮಾಡಲಾಗಿದೆ. 7 ಸಾವಿರ ಜನರು ಹೋಂ ಕ್ವಾರಂಟೈನ್ನಲ್ಲಿದ್ದು, ಜೂನ್ 23ರಂದು ಅತ್ಯಧಿಕ 3,947 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದವು.