ನವದೆಹಲಿ: ದೆಹಲಿ ಹಿಂಸಾಚಾರದ ವೇಳೆ ನಡೆದ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮಾರ ಕೊಲೆ ಪ್ರಕರಣ ಸಂಬಂಧ, ಆರೋಪಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹೀರ್ ಹುಸೇನ್ ಸಲ್ಲಿಸಿದ್ದ ಶರಣಾಗತಿ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದ್ದು, ಕೂಡಲೇ ಪೊಲೀಸರು ತಾಹೀರ್ರನ್ನು ಬಂಧಿಸಿದ್ದಾರೆ.
ನ್ಯಾಯಾಲಯದ ಮುಂದೆ ನಾನೇ ಶರಣಾಗಿ, ತನಿಖೆಗೆ ಸಹಕರಿಸುವೆ ಎಂದು ತಾಹೀರ್ ಹುಸೇನ್ ದೆಹಲಿ ಕೋರ್ಟ್ಗೆ ಶರಣಾಗತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಾಹುಜಾ, ಆರೋಪಿಯ ಮನವಿಯು ಕಾನೂನು ವ್ಯಾಪ್ತಿಯಿಂದ ಹೊರಗಿದೆ ಎಂದು ತಿಳಿಸಿ ಅರ್ಜಿ ತಿರಸ್ಕರಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಕಾಯುತ್ತಿದ್ದ ಪೊಲೀಸರು, ಅರ್ಜಿ ವಜಾ ಆಗುತ್ತಿದ್ದಂತೆಯೇ ತಾಹೀರ್ರನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಚಾಂದ್ ಬಾಗ್ ಪ್ರದೇಶದಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾರ ಮೃತದೇಹ ಪತ್ತೆಯಾಗಿತ್ತು. ಹಿಂಸಾಚಾರದ ವೇಳೆ ಚಾಂದ್ ಬಾಗ್‌ನಲ್ಲಿರುವ ಹುಸೇನ್ಗೆ ಸೇರಿದ ಕಟ್ಟಡವೊಂದರ ಮೇಲೆ ನಿಂತು ಕೆಲವರು ಕಲ್ಲು ತೂರಾಟ ನಡೆಸಿ ಅಂಕಿತ್ ಶರ್ಮಾರನ್ನ ಕೊಂದಿದ್ದಾರೆ ಎಂದು ಆರೋಪಿಸಿ ಮೃತ ಶರ್ಮಾರ ತಂದೆ ರವೀಂದರ್ ಕುಮಾರ್ ದೂರು ನೀಡಿದ್ದರು. ಈ ಸಂಬಂಧ ತಾಹೀರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತಲ್ಲದೇ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹುಸೇನ್ರನ್ನು ಆಪ್ ಅಮಾನತು ಮಾಡಿತ್ತು.