ನವದೆಹಲಿ: ಜನವರಿ 26ರಂದು ನಡೆಯುವ 71ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇನ್ನು ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ದೆಹಲಿ ಮೆಟ್ರೋ ರೈಲಿನ ಪ್ರವೇಶ-ನಿರ್ಗಮನ ದ್ವಾರ ಹಾಗೂ ನಿಲ್ದಾಣಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಲಾಗಿದೆ.
ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷಿತೆಯ ದೃಷ್ಟಿಯಿಂದ ದೆಹಲಿ ಪೊಲೀಸ್ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯ ಸಿಬ್ಬಂದಿಯನ್ನು ನಿಯೋಜಿಸುವ ಹಾಗೂ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ನಿಗಾ ಇಡಲಾಗಿದೆ ಎಂದು ದೆಹಲಿ ಮೆಟ್ರೋ ಪೊಲೀಸ್ ಉಪ ಆಯುಕ್ತ ವಿಕ್ರಮ್ ಪೋರ್ವಾಲ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇನ್ನು ಉದ್ಯೋಗ್ ವಿಹಾರ್, ಲೋಕ್ ಕಲ್ಯಾಣ್ ಮಾರ್ಗ, ಪಟೇಲ್ ಚೌಕ್ ಮೆಟ್ರೋ, ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣಗಳನ್ನು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಮುಚ್ಚಲಾಗುವುದು. ಲಾಲ್ ಕಿಲಾ, ಐಟಿಒ ಸೇರಿದಂತೆ ಇತರ ಕೆಲ ನಿಲ್ದಾಣಗಳನ್ನು ಪಥಸಂಚಲನ ನಡೆಯುವ ವೇಳೆ ಮುಚ್ಚಲಾಗುವುದು ಎಂದು ವಿಕ್ರಮ್ ಪೋರ್ವಾಲ್ ಮಾಹಿತಿ ನೀಡಿದ್ದಾರೆ.