ಇಂದೋರ್ (ಮಧ್ಯ ಪ್ರದೇಶ): ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಪ್ರತಿಕ್ರಿಯಿಸಿದ್ದು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಷ್ಟೊಂದು ತುರ್ತಾಗಿ ಈ ಕಾಯ್ದೆಯನ್ನು ಏಕೆ ಜಾರಿಗೆ ತರಲಾಗುತ್ತಿದೆ ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಸೋಮವಾರ ಸಂಭವಿಸಿದ ಘರ್ಷಣೆಯಲ್ಲಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಸಿಎಂ ಕಮಲ್ ನಾಥ್ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
900 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಘಟನೆಗಳು ಬಹಳ ದುಃಖ ಹಾಗೂ ಕಳವಳವನ್ನುಂಟುಮಾಡುತ್ತವೆ . ಸಿಎಎಯಲ್ಲಿ ಏನಿದೆ ಎಂಬುದನ್ನು ಬದಿಗಿರಿಸೋಣ. ಮೋದಿ ಈಗ ಜಾರಿ ಮಾಡಲು ಹೊರಟಿರುವ ಸಿಎಎಯಿಂದ ನಿರಾಶ್ರಿತರು ಇಲ್ಲಿಗೆ ಬರುತ್ತಾರೆಯೇ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.
ಈ ಕಾನೂನನ್ನು ತರುವ ಅವಶ್ಯಕತೆಯಾದರೂ ಏನು? ಜನಸಂಖ್ಯೆಯ ಸಮೀಕ್ಷೆಗಳು ಮೊದಲಿನಿಂದಲೂ ನಡೆಯುತ್ತಿದ್ದವು. ಆದರೆ, ಈಗ ಅವರಲ್ಲಿ ತಪ್ಪು ಗ್ರಹಿಕೆಗಳು ಹರಡಿ, ಜನರು ತಮ್ಮ ಪೌರತ್ವ ಸುರಕ್ಷಿತವಲ್ಲ ಎಂದು ಭಾವಿಸುವಂತಾಗಿದೆ ಎಂದರು.
ಬಿಜೆಪಿ ಹಾಗೂ ಜೆಡಿಯು ಸಮ್ಮಿಶ್ರ ಸರ್ಕಾರ ಇರುವ ಬಿಹಾರ್ನಲ್ಲಿ ಸಿಎಎ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ನಿರ್ಣಯ ಮಾಡಲಾಗಿದೆ. ಬಿಜೆಪಿಯವರೇ ಅಲ್ಲಿ ಈ ಕಾಯ್ದೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಜೆಪಿ ವಿರೋಧಿಸಿದರೆ ಸರಿ ನಾವು ವಿರೋಧಿಸಿದರೆ ತಪ್ಪು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.