ಅಗರ್ತಲಾ, ತ್ರಿಪುರಾ: ''ಸಿಎಎ ಹಾಗೂ ಕೇಂದ್ರ ಸರ್ಕಾರದ ವಿವಾದಾತ್ಮಕ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಪೂರ್ವ ನಿಯೋಜಿತ ಸಂಚು'' ಎಂದು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ. ಅಗರ್ತಾಲಾದಲ್ಲಿ ಮಾತನಾಡಿದ ಅವರು '' ದೆಹಲಿ ಮೂಲದವರಲ್ಲದವರನ್ನು ಅಲ್ಲಿಗೆ ಕರೆತಂದು ಗಲಭೆ ಸೃಷ್ಟಿಸಲಾಗಿದೆ. ಇವರಿಂದಲೇ ಅನೇಕ ಮನೆಗಳು, ವ್ಯಾಪಾರ ಮಳಿಗೆಗಳು ಧ್ವಂಸವಾಗಿವೆ. ಕೋಮುದ್ವೇಷ ಹಬ್ಬಿಸಲು ಇದೊಂದು ಪೂರ್ವ ನಿಯೋಜಿತ ಕೃತ್ಯ '' ಎಂದು ಅವರು ಕಿಡಿಕಾರಿದ್ದಾರೆ.
ಹಿಂಸಾಚಾರ ಸಂತ್ರಸ್ತರ ನೆರವಿಗಾಗಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿರುವ ಅವರು ಎಲ್ಲರೂ ಸಂತ್ರಸ್ತರ ನೆರವಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ. ಗಲಭೆಕೋರರ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ತ್ರಿಪುರಾ ರಾಜ್ಯದಲ್ಲಿ ವಿಪಕ್ಷ ನಾಯಕರಾಗಿರುವ ಅವರು ತಮ್ಮ ಸಿಪಿಐ(ಎಂ) ಪಕ್ಷದ ಮೂಲಕ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ದೇಣಿಗೆ ಸಂಗ್ರಹಣೆ ಮುಂದುವರೆಯಲಿದ್ದು ತಮ್ಮ ಪಕ್ಷದ ಹಲವು ಮುಖಂಡರು ದೇಣಿಗೆ ಸಂಗ್ರಹಕ್ಕೆ ಸಾಥ್ ನೀಡುತ್ತಿದ್ದಾರೆ.
ದೆಹಲಿ ಹಿಂಸಾಚಾರ ತೀವ್ರವಾಗಿದ್ದ ಕೇವಲ ಫೆಬ್ರವರಿ 24 ಹಾಗೂ ಫೆಬ್ರವರಿ 26ರವರೊಳಗೆ ಕೇವಲ ಎರಡು ದಿನಗಳಲ್ಲಿ 53ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 700 ಪ್ರಕರಣಗಳು ದಾಖಲಾಗಿವೆ. 2,400ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಂದಾಜಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೆಹಲಿ ಹಿಂಸಾಚಾರದ ವೇಳೆ 79 ಮನೆಗಳು, 327 ಅಂಗಡಿಗಳು ಬೆಂಕಿಗಾಹುತಿಯಾಗಿವೆ ಎಂದು ಸ್ಪಷ್ಟಪಡಿಸಿದ್ದರು.