ಘಾಜಿಯಾಬಾದ್/ಉತ್ತರ ಪ್ರದೇಶ : ಬಾಯ್ಫ್ರೆಂಡ್ ಜೊತೆ ಸೇರಿ 16 ವರ್ಷದ ಸ್ವಂತ ಮಗಳೇ ದೆಹಲಿ ಮಹಿಳಾ ಪೊಲೀಸ್ ಮುಖ್ಯ ಕಾನ್‌ಸ್ಟೇಬಲ್ ಅವರನ್ನು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.
ಶಶಿಮಾಲಾ ಹತ್ಯೆಯಾದ ಮಹಿಳಾ ಮುಖ್ಯ ಕಾನ್‌ಸ್ಟೇಬಲ್, ಉತ್ತರ ಪ್ರದೇಶದ ಘಾಜಿಯಾಬಾದ್ನ ಬ್ರಿಜ್ ವಿಹಾರ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲೇ ಕೊಲೆ ಮಾಡಲಾಗಿದೆ ಎಂದು ಘಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.
ಶಶಿಮಾಲಾ ಪತಿ ಗೋಪಾಲ್ ಠಾಕೂರ್ ಬಿಹಾರ್ನಲ್ಲಿ ನೆಲೆಸಿದ್ದು, ನೆರೆಹೊರೆಯವರು ಅವರಿಗೆ ಶಶಿಮಾಲಾ ಹತ್ಯೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಗೋಪಾಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಶಿಮಾಲಾ ಮತ್ತು ಗೋಪಾಲ್ ಬೇರೆ-ಬೇರೆ ವಾಸಿಸುತ್ತಿದ್ದರು ಎನ್ನಲಾಗಿದೆ. ಶಶಿಮಾಲಾ ಮನೆಯಿಂದ ದುರ್ವಾಸನೆ ಬರುತ್ತಿದಿದ್ದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಗೋಪಾಲ್ ಹಾಗೂ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಸ್ವಿಮ್ಮಿಂಗ್ ಪೂಲ್ನಲ್ಲಿ ರಕ್ತಪೂರಿತ ಶಶಿಕಲಾ ಶವ ಪತ್ತೆಯಾಗಿದೆ.
ಮಗಳ ಬಾಯ್ಫ್ರೆಂಡ್ ಮನೆಗೆ ಬಂದಿದ್ದು, ಇದಕ್ಕೆ ತಾಯಿ ಶಶಿಮಾಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಮಗಳು ಬಾಯ್ಫ್ರೆಂಡ್ ಜೊತೆ ಸೇರಿ ಶಶಿಮಾಲಾಳನ್ನು ಕೊಲೆ ಮಾಡಿದ್ದಾಳೆ ಎಂದು ಅವರ ಪತಿ ಗೋಪಾಲ್ ದೂರಿನಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಶರ್ಮಾ, ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.