ನವದೆಹಲಿ: ದೆಹಲಿಯ ಪೊಲೀಸ್ ಪೇದೆಯೊಬ್ಬ ಸಹೋದ್ಯೋಗಿಯಾಗಿದ್ದ ತನ್ನ ಪತ್ನಿಯನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಂದು ಬೆಳಗ್ಗೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ 33 ವರ್ಷದ ಮಹಿಳಾ ಕಾನ್‌ಸ್ಟೆಬಲ್‌ನ ಶವವು ಕಾರಿನೊಳಗೆ ಪತ್ತೆಯಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರ ತಂಡವನ್ನು ಮೃತ ಮಹಿಳಾ ಪೇದೆಯ ಗಂಡನನ್ನು ಪತ್ತೆ ಹಚ್ಚಲು ಕಳುಹಿಸಲಾಗಿತ್ತು. ಈ ವೇಳೆ ಆಕೆಯ ಪತಿ ಕೂಡ ಮೀರತ್‌ನ ತನ್ನ ಹಳ್ಳಿಯಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2010ರಲ್ಲಿ ಮದುವೆಯಾದ ಈ ಪೊಲೀಸ್ ದಂಪತಿ ಆಗಾಗ ಸಂಸಾರಿಕ ವಿಚಾರಗಳಿಗೆ ಜಗಳವಾಡುತ್ತಿದ್ದರು. ಅದರಲ್ಲೂ ಗಂಡನ ಕುಡಿಯುವ ಅಭ್ಯಾಸದ ಬಗ್ಗೆ ಯಾವಾಗಲೂ ವಾದ, ಜಗಳಗಳಾಗುತ್ತಿದ್ದವು ಎಂದು ಅವರು ಹೇಳಿದರು.
ಸದ್ಯ ಆಕೆಯ ಶವವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಗೆ ಬುಧವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿದರು.