ನವದೆಹಲಿ: ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್‌ರನ್ನು ದೆಹಲಿ ವಿಶೇಷ ಸೆಲ್ ಪೊಲೀಸರು ಬಂಧಿಸಿದ್ದಾರೆ.
ಶಾರ್ಜೀಲ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ದೇಶದ್ರೋಹದ ಪ್ರಕರಣದ ಆರೋಪಿ ಶಾರ್ಜೀಲ್ ಅಸ್ಸೋಂ ಪೊಲೀಸರಿಂದ ಬಂಧಿಸಲ್ಪಟ್ಟು ಗುವಾಹಟಿ ಜೈಲಿನಲ್ಲಿದ್ದ.
ಈಶಾನ್ಯ ದೆಹಲಿ ಗಲಭೆ ಸಂಬಂಧ ಜುಲೈ 21ರಂದು ದೆಹಲಿ ಪೊಲೀಸರು ಶಾರ್ಜೀಲ್ರನ್ನು ಬಂಧಿಸಿ ರಾಷ್ಟ್ರ ರಾಜಧಾನಿಗೆ ಕರೆತರಲು ನಿರ್ಧರಿಸಿದ್ದರು. ಆದರೆ ಈ ವೇಳೆ ಶಾರ್ಜೀಲ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಬಂಧನ ಸಾಧ್ಯವಾಗಿರಲಿಲ್ಲ.
ಹಲವೆಡೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭ ಇಮಾಮ್ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಜುಲೈ 25ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರು.