ನವದೆಹಲಿ: ದೆಹಲಿ ಹೈಕೋರ್ಟ್ ಜೂನ್ 1ರಿಂದ 30ವರೆಗೆ ಇರಬೇಕಿದ್ದ ಬೇಸಿಗೆ ರಜೆಗಳನ್ನು ರದ್ದು ಮಾಡಿದೆ. ಲಾಕ್ಡೌನ್ನಿಂದ ಕಡಿಮೆ ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದು ಅದನ್ನು ತುಂಬಿಕೊಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದೆ.
ದೆಹಲಿ ಹೈಕೋರ್ಟ್ ವ್ಯಾಪ್ತಿಗೆ ಬರುವ ಎಲ್ಲಾ ಉಪ ನ್ಯಾಯಾಲಯಗಳ ರಜೆಯನ್ನೂ ಕೂಡಾ ರದ್ದು ಮಾಡಲಾಗಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಾಟೀಲ್ ಹಾಗೂ ಇತರ ನ್ಯಾಯಮೂರ್ತಿಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೋರ್ಟ್ಗಳಲ್ಲಿ ಮೊಕದ್ದಮೆಗಳಿರುವವರು ಲಾಕ್ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಈ ವೇಳೆ ಕೋರ್ಟ್ಗಳು ರಜೆಗಳನ್ನು ತೆಗೆದುಕೊಂಡರೆ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುತ್ತದೆ. ಈಗ ಸದ್ಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅತ್ಯಂತ ಪ್ರಮುಖವಾದ ಮೊಕದ್ದಮೆಗಳ ವಿಚಾರಣೆ ಮಾಡಲಾಗುತ್ತಿದೆ.
ಮಾರ್ಚ್ 15ರಿಂದ ಕೇವಲ ತುರ್ತು ಮೊಕದ್ದಮೆಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತಿದೆ. ಈಗ ಮತ್ತೆ ಜೂನ್ನಲ್ಲೂ ಕೂಡಾ ಕೋರ್ಟ್ಗಳು ಕಾರ್ಯ ನಿರ್ವಹಣೆ ಮಾಡಲಿವೆ. ಹೈಕೋರ್ಟ್ ನಿರ್ಧಾರಕ್ಕೆ ವಕೀಲರು ಸ್ವಾಗತಿಸಿದ್ದಾರೆ.