ನವದೆಹಲಿ: ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ಮುಖೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.
ಹಾಗೆಯೇ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ (ಬಿಸಿಐ) ಅವರ ಸಲಹೆಗಾರರಿಗೆ ಸೂಕ್ತ ಸಂವೇದನೆ ನೀಡುವಂತೆ ಕೋರಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಇವರ ಅರ್ಜಿ ವಿಚಾರಣೆ ನಡೆಸಿ ವಜಾಗೊಳಿದ್ದಾರೆ. ಅಪರಾಧಿಗಳಿಗೆ ಈಗಾಗಲೇ ಕಠಿಣ ಶಿಕ್ಷೆ ವಿಧಿಸಲಾಗಿದೆ. ಗಂಭೀರ ಪ್ರಕರಣದ ಅಪರಾಧಿಗಳಿಗೆ ಪರಿಹಾರ ಪಡೆಯಲು ಎಲ್ಲ ರೀತಿಯ ಕಾರ್ಯತಂತ್ರಗಳ ಮೊರೆ ಹೋಗಬಾರದು ಎಂದು ವಕೀಲರಿಗೆ ನ್ಯಾಯಾಧೀಶರು ಹೇಳಿದರು.
ಒಬ್ಬ ವಕೀಲ ಸಾಮರ್ಥ್ಯಕ್ಕೆ ತಕ್ಕಂತೆ, ತನ್ನ ಕಕ್ಷಿದಾರನ ಪ್ರಕರಣವನ್ನು ನ್ಯಾಯಾಲಯದ ಮುಂದೆ ಪ್ರತಿನಿಧಿಸಬೇಕು. ಕಠಿಣ ಶಿಕ್ಷೆ ವಿಧಿಸಿದ ಬಳಿಕ ಎಲ್ಲ ರೀತಿಯ ಕಾರ್ಯತಂತ್ರಗಳನ್ನು ಬಳಸಿ ಕಕ್ಷಿದಾರನಿಗೆ ಪರಿಹಾರ ಪಡೆಯಲು ಮುಂದಾಗಬಾರದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಅಪರಾಧಿ ಸಿಂಗ್ ಪರವಾಗಿ ವಾದ ಮಂಡಿಸಿರುವ ವಕೀಲ ಎಂ.ಎಲ್.ಶರ್ಮಾ ಅವರು ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದಾರೆ. ಪರಿಣಾಮಕಾರಿಯಾಗಿ ದಾಖಲೆಗಳನ್ನು ನ್ಯಾಯಾಲಯದ ಮುಂದಿಡಲು ವಿಫಲರಾಗಿದ್ದಾರೆ ಎಂದು ಹೇಳಿದೆ.
ಈಗಾಗಲೇ ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಅಪರಾಧಿಗಳನ್ನು ಗಲ್ಲಿಗೆ ಹಾಕುವಂತೆ ಮಾರ್ಚ್ 5 ರಂದು ಡೆತ್ ವಾರೆಂಟ್ ಹೊರಡಿಸಲಾಗಿದೆ. ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ರನ್ನು ಗಲ್ಲಿಗೇರಿಸಲಾಗುತ್ತದೆ.