ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೇ ವಿಷಯವಾಗಿ ಮಾತನಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿ ಮಾಡಿ, ಮಾತುಕತೆ ನಡೆಸಿದರು.
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದ ವೇಳೆ ದೆಹಲಿಯಲ್ಲಿ ಕೆಲವೊಂದು ಸಡಲಿಕೆ ನೀಡಿದ್ದ ಪರಿಣಾಮವಾಗಿ ಇದೀಗ ಪ್ರತಿದಿನ ಸಾವಿರಾರು ಕೋವಿಡ್-19 ಪ್ರಕರಣ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 31,309 ಪ್ರಕರಣಗಳಿದ್ದು, 905 ಜನರು ಸಾವನ್ನಪ್ಪಿದ್ದಾರೆ. ಜುಲೈ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 5 ಸಾವಿರ ಆಗಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಎಲ್ಲ ರೀತಿಯ ಸಹಕಾರ ಕೋರಿದ್ದು ಅದಕ್ಕೆ ಸಕಾರಾತ್ಮಕವಾಗಿ ಅವರು ಸ್ಪಂದಿಸಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ದೆಹಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸ್ಥಳೀಯರಿಗೆ ಮಾತ್ರ ಮೀಸಲು ಎಂಬ ಆದೇಶ ಹೊರಡಿಸಿದ್ದರು. ಈ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್ ವಿರೋಧ ವ್ಯಕ್ತಪಡಿಸಿ ಆದೇಶ ರದ್ಧುಗೊಳಿಸಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ್ದ ಕೇಜ್ರಿವಾಲ್ ಎಲ್ಲರಿಗೂ ಚಿಕಿತ್ಸೆ ನೀಡುವುದಾಗಿ ಘೋಷಣೆ ಮಾಡಿದ್ದರು.