ನವದೆಹಲಿ: ನಗರದಲ್ಲಿ ಕ್ಯಾನ್ಸರ್ - ಕೊರೊನಾ ಚಿಕಿತ್ಸೆಗಾಗಿ ಪರದಾಡುತ್ತಿದ್ದ ರೋಗಿಯೊಬ್ಬರ ಹೋರಾಟವನ್ನು ಈಟಿವಿ ಭಾರತ್ ವರದಿ ಮಾಡಿ ಬೆಳಕಿಗೆ ತಂದಿತ್ತು. ಆ ನಂತರ ಮಹಿಳೆಯನ್ನು ಶನಿವಾರ ಜಿ. ಬಿ. ಪಂತ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕ್ಯಾನ್ಸರ್ ರೋಗಿಯ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದ ಹಿನ್ನೆಲೆ ರೋಗಿಗೆ ಚಿಕಿತ್ಸೆ ನೀಡಲು ರಾಷ್ಟ್ರ ರಾಜಧಾನಿಯ ಗೋವಿಂದ್ ವಲ್ಲಭ್ ಪಂತ್ ಆಸ್ಪತ್ರೆ ನಿರಾಕರಿಸಿತ್ತು. ಇದರಿಂದ ನಗರದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ವಾಸಿಸುವ ರೋಗಿಯ ಕುಟುಂಬ ದಿಕ್ಕು ತೋಚದಂತಾಗಿ ಚಿಂತೆಗೀಡಾಗಿತ್ತು.
ಆದರೆ, ಇಷ್ಟಕ್ಕೆ ಸುಮ್ಮನಾಗದ ರೋಗ ಪೀಡಿತ ಮಹಿಳೆಯ ಮಗಳು ತಾಯಿಯ ಹದಗೆಟ್ಟ ಸ್ಥಿತಿಯ ಕುರಿತು ಸರ್ಕಾರ ಮತ್ತು ಆಸ್ಪತ್ರೆ ಅಧಿಕಾರಿಗಳ ಗಮನಕ್ಕೆ ತಂದು ಸಹಾಯ ಕೋರಿದ್ದಳು. "ನನ್ನ ತಾಯಿ ಕಳೆದ ಒಂದು ವರ್ಷದಿಂದ ಜಿ. ಬಿ. ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ನಾವು ಅವಳನ್ನು ಕೀಮೋ ಥೆರೇಪಿಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದೆವು ಆಗ ಮೊದಲು ಕೊರೊನಾ ಪರೀಕ್ಷೆಯನ್ನು ಮಾಡಬೇಕೆಂದು ತಿಳಿಸಲಾಯಿತು. ದುರದೃಷ್ಟವಶಾತ್ ನನ್ನ ತಾಯಿಯ ಕೊರೊನಾ ವೈರಸ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಜಿ. ಬಿ. ಪಂತ್ ಆಸ್ಪತ್ರೆಯು ಬೆಡ್ ಕೊರತೆಯಿದೆ ಎಂದು ಹೇಳಿ ನನ್ನ ತಾಯಿಯ ಪ್ರವೇಶವನ್ನು ನಿರಾಕರಿಸಿತು. ಆದರೆ, ವೆಬ್‌ಸೈಟ್‌ನಲ್ಲಿ ಸಾಕಷ್ಟು ಸೀಟ್ಗಳು ಲಭ್ಯವಿರುವುದು ಗಮನಿಸಬಹುದಾಗಿದೆ ಎಂದು ಕ್ಯಾನ್ಸರ್-ಕರೋನಾ ರೋಗಿಯ ಮಗಳು ಹೇಳಿದರು.