ಮಥುರಾ(ಉತ್ತರಪ್ರದೇಶ): ಉದ್ಯಮಿಯೊಬ್ಬ ಕುಟುಂಬದ ಎಲ್ಲ ಸದಸ್ಯರಿಗೂ ಗುಂಡಿಕ್ಕಿ ಕೊಲೆ ಮಾಡಿ ತದನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.
ನೀರಜ್ ಅಗರ್‌ವಾಲ್ ಹಾಗೂ ಉಳಿದವರ ಮೃತದೇಹ ಯಮುನಾ ಎಕ್ಸ್ಪ್ರೆಸ್ನಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸಿಕ್ಕಿವೆ. ಬುಧವಾರ ಪತ್ನಿ ನೇಹಾ ಅಗರ್‌ವಾಲ್, ಮಗಳು ಧನ್ಯಾ, ಮಗ ಶೌರ್ಯ ಮೇಲೆ ಗುಂಡಿ ಹಾರಿಸಿದ್ದು, ತದನಂತರ ಪಿಸ್ತೂಲಿನಿಂದ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ದೆಹಲಿ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ರಾತ್ರಿ ಇವರೆಲ್ಲರೂ ಒಟ್ಟಿಗೆ ಹೊಸ ವರ್ಷ ಸಂಭ್ರಮಾಚರಣೆ ಮಾಡಲು ತೆರಳಿದ್ದರು ಎಂದು ತಿಳಿದು ಬಂದಿದೆ.
ಉದ್ಯಮ ನಡೆಸುತ್ತಿದ್ದ ನೀರಜ್ ಅಗರ್‌ವಾಲ್ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರಿಂದಲೇ ಈ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಪೊಲೀಸರು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.