ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್ಡೌನ್ ಜಾರಿಗೆ ತಂದ ಪರಿಣಾಮ ದೇಶವೇ ಸ್ತಬ್ದಗೊಂಡಿದೆ. ಈ ನಿಟ್ಟಿನಲ್ಲಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 'ಮಧ್ಯಮ' ವಿಭಾಗದಲ್ಲಿ ಉಳಿದುಕೊಳ್ಳುವ ಮೂಲಕ ಸುಧಾರಣೆ ಕಂಡಿದೆ.
ಬಹುತೇಕರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದು, ಇದರಿಂದ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಇದು ಕೂಡ ಗಾಳಿಯ ಗುಣಮಟ್ಟ ಹೆಚ್ಚಲು ಪ್ರಮುಖ ಕಾರಣ. ಲಾಕ್ಡೌನ್ನಿಂದ ಕೈಗಾರಿಕೆಗಳೂ ಸಹ ಸ್ತಬ್ದಗೊಂಡಿದೆ.
ಲಾಕ್ಡೌನ್ ಜಾರಿಗೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆಯಿಂದ ಕೂಡಿತ್ತು. ಅಪಾಯಕಾರಿ ಮಟ್ಟದಲ್ಲಿತ್ತು. ವಾಯುಮಾಲಿನ್ಯ ಪ್ರಮಾಣವೂ ಹೆಚ್ಚಾಗಿತ್ತು. ಅಲ್ಲದೇ, ದೇಶದಲ್ಲೇ ಅತಿ ಕೆಟ್ಟ ವಾತಾವರಣ ಇರುವ ಹಾಗೂ ಅತ್ಯಂತ ಕಡಿಮೆ ಆಮ್ಲಜನಕ ಲಭ್ಯವಿರುವ ನಗರ ಎಂಬ ಕುಖ್ಯಾತಿಗೂ ರಾಜಧಾನಿ ಒಳಗಾಗಿತ್ತು. ಅಂತಹ ವಿಷಮ ಸ್ಥಿತಿಯಲ್ಲಿದ್ದ ದೆಹಲಿ ಈಗ ಸುಸ್ಥಿತಿಗೆ ಬಂದಿದೆ.
ವಾಯು ಗುಣಮಟ್ಟ ಮತ್ತು ವಾತಾವರಣ ಮುನ್ಸೂಚನೆ ಮತ್ತು ಸಂಶೋಧನೆ (ಎಸ್ಎಎಫ್ಎಆರ್) ಪ್ರಕಾರ ದೆಹಲಿಯಲ್ಲಿ 101, ಉತ್ತರ ಪ್ರದೇಶದ ನೋಯ್ಡಾದಲ್ಲಿ 195 ಮತ್ತು ಹರಿಯಾಣದ ಗುರುಗ್ರಾಮದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 106 ಅಂಕ ತಲುಪಿದೆ.
ಸದ್ಯದ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿರುವುದೇ ವಿನಃ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಂದು ಎಸ್ಎಎಫ್ಎಆರ್ ಹೇಳಿದೆ.