ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ಧತಿ ಬಳಿಕ ಕಣಿವೆ ನಾಡಿಗೆ ಪ್ರಯಾಣ ಬೆಳೆಸಿದ್ದ ರಾಹುಲ್ ಗಾಂಧಿ ನೇತೃತ್ವದ ತಂಡ ಶ್ರೀನಗರ ವಿಮಾನ ನಿಲ್ದಾಣದಿಂದ ದೆಹಲಿಯತ್ತ ವಾಪಸ್ ಆಗಿದೆ ಎಂದು ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕರಾದ ಡಿ. ರಾಜಾ, ಶರದ್ ಯಾದವ್, ಮಜೀನ್ ಮೆನನ್ ಮತ್ತು ಮನೋಜ್ ಜಾ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಶ್ರೀನಗರದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಇವರನ್ನ ಮುಂದೆ ಪ್ರಯಾಣ ಬೆಳೆಸದಂತೆ ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಶ್ರೀನಗರಕ್ಕೆ ಹೊರಟ ರಾಹುಲ್ ಗಾಂಧಿ!
ಯಾವುದೇ ಕಾರಣಕ್ಕೂ ರಾಜಕೀಯ ಮುಖಂಡರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಬಾರದು. ಇದರಿಂದ ಇಲ್ಲಿನ ಜನರು ತೊಂದರೆಗೆ ಒಳಗಾಗುತ್ತಾರೆ ಎಂದು ಜಮ್ಮು-ಕಾಶ್ಮೀರ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮಾಡಿತ್ತು. ಈ ನಡುವೆಯೂ ವಿರೋಧ ಪಕ್ಷಗಳ ನಿಯೋಗ ಇಲ್ಲಿನ ಜನರೊಂದಿಗೆ ವಾಸ್ತವ ಪರಿಸ್ಥಿತಿ ಚರ್ಚೆ ನಡೆಸಲು ಕಣಿವೆ ರಾಜ್ಯಕ್ಕೆ ತೆರಳಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದುಗೊಂಡ ಬಳಿಕ ಅಲ್ಲಿ ಹಿಂಸಾತ್ಮಕ ಕೃತ್ಯ ಹೆಚ್ಚಾಗಿ ನಡೆಯುತ್ತಿದ್ದು, ಪ್ರತಿದಿನ ಸಾವು-ನೋವು ಸಂಭವಿಸುತ್ತಿವೆ ಎಂಬ ಮಾತನ್ನು ಈ ಹಿಂದೆ ಖುದ್ದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇದರ ಮಧ್ಯೆ ತಾವು ಕಣಿವೆ ನಾಡಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದರು. ಇನ್ನು ಶ್ರೀನಗರದಿಂದ ಈ ನಿಯೋಗವನ್ನ ವಾಪಸ್ ಕಳಿಸಿರುವುದಕ್ಕಾಗಿ ಗುಲಾಮ್ ನಬಿ ಆಜಾದ್,ಶರದ್ ಯಾದವ್, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆರ್ಟಿಕಲ್ 370 ರದ್ದುಗೊಳ್ಳುತ್ತಿದ್ದಂತೆ ಕಾಂಗ್ರೆಸ್ನ ಗುಲಾಬ್ ನಬಿ ಆಜಾದ್ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಶ್ರೀನಗರ ಏರ್ಪೋರ್ಟ್ನಿಂದ ಅವರನ್ನ ವಾಪಸ್ ಕಳುಹಿಸಲಾಗಿತ್ತು.
ಇದೇ ವೇಳೆ ಮಾತನಾಡಿರುವ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮಾತನಾಡಿದ್ದು, ಕಣಿವೆ ನಾಡಿಗೆ ಸದ್ಯ ರಾಹುಲ್ ಗಾಂಧಿ ಅವಶ್ಯಕತೆ ಇಲ್ಲ. ಪಾರ್ಲಿಮೆಂಟ್ನಲ್ಲಿ ಅವರ ಸಹದ್ಯೋಗಿಗಳು ಮಾತನಾಡುವಾಗ ಅವರ ಅವಶ್ಯಕತೆ ಇದೆ. ಇಲ್ಲಿ ಬಂದು ಅವರು ರಾಜಕೀಯ ನಡೆಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.