ನವದೆಹಲಿ: ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಲು ಅಣಿಯಾಗಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಎರಡನೇ ಇನ್ನಿಂಗ್ಸ್ ಶುರು ಮಾಡುವ ಮೊದಲೇ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಇಳಿಕೆ ಆಗಿರುವ ಬಗ್ಗೆ ವರದಿಯಾಗಿದೆ.
ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2018-19ರಲ್ಲಿ ಎಫ್‌ಡಿಐ ಶೇ 1ರಷ್ಟು ಇಳಿಕೆಯಾಗಿದೆ. 2017-18ರಲ್ಲಿ ₹ 3.13 ಲಕ್ಷ ಕೋಟಿ ಎಫ್‌ಡಿಐ ಹರಿದು ಬಂದಿತ್ತು. 2018-19ರಲ್ಲಿ ₹ 3.10 ಲಕ್ಷ ಕೋಟಿಯಷ್ಟಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ತಿಳಿಸಿದೆ.
ಯುಪಿಎ ಆಡಳಿತದ ಅವಧಿಯ 2012-13ರಲ್ಲಿ ಎಫ್‌ಡಿಐ ಒಳಹರಿವು ಶೇ 36ರಷ್ಟು ಕಡಿಮೆಯಾಗಿ ₹ 1.56 ಲಕ್ಷ ಕೋಟಿಗಳಿಗೆ ತಲುಪಿತ್ತು. ಇದಾದ ನಂತರ ಒಳ ಹರಿವು ಏರುಗತಿಯಲ್ಲಿ ಸಾಗಿ 2017-18ರಲ್ಲಿ ಗರಿಷ್ಠ ಮಟ್ಟ ತಲುಪಿತ್ತು.
ಕಂಪ್ಯೂಟರ್ ಸಾಫ್ಟ್ವೇರ್ & ಹಾರ್ಡ್ವೇರ್, ಸೇವೆಗಳು, ಟ್ರೇಡಿಂಗ್ ಹಾಗೂ ವಾಹನ ಉದ್ಯಮ ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿದೆ. ಅತಿಹೆಚ್ಚು ಔಷಧಿ (ಶೇ 74ರಷ್ಟು), ಟೆಲಿಕಾಂ (ಶೇ 56ರಷ್ಟು), ನಿರ್ಮಾಣ ಹಾಗೂ ವಿದ್ಯುತ್ ವಲಯಗಳಲ್ಲಿ ಕ್ಷೀಣಿಸಿದೆ.
ಭಾರತದ ಆರ್ಥಿಕತೆ ಎರಡಂಕಿ ಬೆಳವಣಿಗೆ ತಲುಪಬೇಕಾದರೆ ಕೇಂದ್ರ ಸರ್ಕಾರ ಎಫ್‌ಡಿಐ ಆಕರ್ಷಣೆಗೆ ಮುಂದಾಗಬೇಕು. ಮೂಲ ಸೌಕರ್ಯ ವಲಯದ ಅಭಿವೃದ್ಧಿಗೆ ಎಫ್‌ಡಿಐ ಒಳಹರಿವಿನಲ್ಲಿ ಹೆಚ್ಚಳ ಅತ್ಯಗತ್ಯವಾಗಿದೆ. ಎಫ್‌ಡಿಐ ಕಡಿಮೆಯಾದರೆ ದೇಶದ ಅಂತಾರಾಷ್ಟ್ರೀಯ ಪಾವತಿ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ರೂಪಾಯಿ ಮೌಲ್ಯ ಏರುಪೇರಿಗೂ ಕಾರಣವಾಗಲಿದೆ.