ಆಗ್ರಾ (ಉತ್ತರ ಪ್ರದೇಶ): ಕೋವಿಡ್-19 ಪರೀಕ್ಷೆ ಮತ್ತು ವರದಿ ಕೈಸೇರಲು ವಿಳಂಬವಾಗುತ್ತಿದ್ದು, ಕೊರೊನಾ ರೋಗಿಗಳ ರಕ್ತ ಸಂಬಂಧಿಗಳಿಗೆ ಇದರಿಂದಾಗಿ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೂ ಅಡ್ಡಿಯಾಗುತ್ತಿದೆ.
ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಸಂಗ್ರಹಿಸಲಾದ ಮಾದರಿಗಳ ಸಂಖ್ಯೆ 1.5 ಲಕ್ಷ ದಾಟಿದ್ದು, ವರದಿ ಬರಲು ನಾಲ್ಕರಿಂದ ಐದು ದಿನಗಳು ಬೇಕಾಗುತ್ತದೆ. ಪ್ರತಿದಿನ ನೂರಾರು ಜನರು ಪರೀಕ್ಷೆಗಾಗಿ ಸರದಿಯಲ್ಲಿ ನಿಂತಿರುತ್ತಾರೆ.
ಕ್ಷಿಪ್ರ ಆಂಟಿಜೆನ್ ಪರೀಕ್ಷಾ ವರದಿಗಳು ಏಕೆ ವಿಳಂಬವಾಗುತ್ತಿವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಪಗಳನ್ನು ನಿರಾಕರಿಸಿದ್ದು, ಪ್ರತಿಯೊಬ್ಬರೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಈ ಹಿಂದೆ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ಖಾಸಗಿ ಪ್ರಯೋಗಾಲಯಗಳಿಗೆ ಮತ್ತೆ ಅನುಮತಿ ನಿರಾಕರಿಸಲಾಗಿದೆ. ಜನರು ಈಗ ಸಂಪೂರ್ಣವಾಗಿ ಸರ್ಕಾರಿ ಸೌಲಭ್ಯಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಸಂದರ್ಭಗಳಲ್ಲಿ ಕೊರೊನಾ ಪರೀಕ್ಷೆ ಮತ್ತು ಕೊರೊನಾ ಸೋಂಕಿತರನ್ನು ನಿಭಾಯಿಸಲು ಆಸ್ಪತ್ರೆಗಳು ಅಸಮರ್ಪಕವಾಗಿವೆ ಎಂದು ಕೊರೊನಾ ರೋಗಿಗಳು ಮತ್ತು ಅವರ ಸಂಬಂಧಿಕರು ದೂರುತ್ತಿದ್ದಾರೆ.
ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು ಮತ್ತು ಹಾಸಿಗೆಗಳ ಕೊರತೆಯ ಕುರಿತು ಪರಿಶೀಲನೆ ನಡೆಸಬೇಕೆಂದು ಸೋಂಕಿತರ ಕುಟುಂಬ ಸದಸ್ಯರು ಕೋರಿದ್ದಾರೆ.
ರಾಜ್ಯ ಸರ್ಕಾರವು ಪರೀಕ್ಷಾ ಶುಲ್ಕ ಮತ್ತು ಆಸ್ಪತ್ರೆಯ ಶಿಲ್ಕವನ್ನು ನಿಗದಿಪಡಿಸಿದ್ದರೂ ಸಹ, ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಲ್ಯಾಬ್‌ಗಳ ವಿರುದ್ಧದ ಆರೋಪಗಳು ಮತ್ತೆ ಉತ್ತುಂಗಕ್ಕೇರಿವೆ.