ಬಲರಾಂಪುರ ( ಉತ್ತರ ಪ್ರದೇಶ ) : ವ್ಯಕ್ತಿಯೊಬ್ಬರ ಮೃತದೇಹವನ್ನು ಪುರಸಭೆಯ ಕಸದ ವಾಹನದಲ್ಲಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದ ಅಮಾನವೀಯ ಘಟನೆ ಜಿಲ್ಲೆಯ ಉಟ್ರೌಲಾ ಚೌಕ್ ಬಳಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ವಿಷಯ ಬೆಳಕಿಗೆ ಬಂದಿದೆ.
ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲು ಉಟ್ರೌಲಾ ಪೊಲೀಸ್ ಠಾಣೆಯ ಹೌಸ್ ಆಫೀಸರ್ (ಎಸ್‌ಎಚ್‌ಒ) ಆರ್.ಕೆ ರಾಮನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಮೃತದೇಹ ಶದುಲ್ಲಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶೌಡೌರಾ ಗ್ರಾಮದ ನಿವಾಸಿ ಜಿನ್ಕಿನ್ ಎಂಬಾತನದ್ದು ಎಂದು ಗುರುತಿಸಿದ್ದರು. ಆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುರಸಭೆಯ ಕಸದ ವಾಹನದಲ್ಲಿ ಸಾಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಲರಾಂಪುರ ಎಸ್ಪಿ ದೇವ್ ರಂಜನ್ ವರ್ಮಾ, ಕಸದ ವ್ಯಾನ್‌ನಲ್ಲಿ ಮೃತ ದೇಹ ಸಾಗಿಸಿದ ವಿಡಿಯೋವನ್ನು ನಾನು ಮತ್ತು ಜಿಲ್ಲಾಧಿಕಾರಿ ನೋಡಿದ್ದೇವೆ. ಕೋವಿಡ್ ಭಯದಿಂದ ಈ ರೀತಿ ಮಾಡಿರಬಹುದು, ಆದರೆ, ಅವರು ಪಿಪಿಇ ಧರಿಸಬೇಕಿತ್ತು. ಪೊಲೀಸರು ಮತ್ತು ಪುರಸಭೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ