ಸಾಂಗ್ಲಿ(ಮಹಾರಾಷ್ಟ್ರ): ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕೆಲವೆಡೆ ಮನುಷ್ಯನನ್ನು ಕಸದಂತೆ ಕಾಣುವಂತೆ ಮಾಡಿದೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆನಾರೋಗ್ಯದಿಂದ ಮೃತಪಟ್ಟಿದ್ದ ಯುವಕನ ಮೃತದೇಹವನ್ನು ತ್ಯಾಜ್ಯ ವಿಲೇವಾರಿ ಮಾಡುವ ವಾಹನದಲ್ಲಿ ಸಾಗಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ರಾಯಗಡ್ ಜಿಲ್ಲೆಯಲ್ಲಿ ಮೇ 11 ರಂದು ವಾಪಸ್ ಆಗಿದ್ದ ಯುವಕನನ್ನು ಜಿಲ್ಲಾಡಳಿತ 14 ದಿನಗಳವರೆಗೆ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಈ ವೇಳೆ ಹೊಟ್ಟೆನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಸೋಮವಾರ ತಡರಾತ್ರಿ ಯುವಕ ಮೃತಪಟ್ಟಿದ್ದಾನೆ.
ಯುವಕ ಕೋವಿಡ್-19 ಸೋಂಕಿತರಿರುವ ಪ್ರದೇಶದಿಂದ ಬಂದಿದ್ದಾನೆ ಎಂದು ಸ್ಥಳೀಯರು ವದಂತಿಗಳನ್ನು ಹಬ್ಬಿಸಿದ್ದಾರೆ. ಅಲ್ಲದೆ, ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಅಲ್ಲಿನ ಪುರಸಭೆ ಮುಖ್ಯಸ್ಥ ಅಭಿಜಿತ್ ಹರಾಲೆ, ಯುವಕನ ಮೃತದೇಹವನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದ್ರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಬೇರೆ ವಾಹನ ಚಾಲಕರನ್ನು ಸಂಪರ್ಕಿಸಿದ್ರೂ ವದಂತಿಗಳನ್ನು ಹಬ್ಬಿಸಿದ್ದ ಪರಿಣಾಮ ಯಾರೂ ಮುಂದೆ ಬಂದಿಲ್ಲ. ಹೀಗಾಗಿ 6 ಗಂಟೆಗಳ ನಂತ್ರ ಬೇರೆ ದಾರಿ ಇಲ್ಲದೆ, ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗಿದ್ದ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಶವವನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.