ಡೆಹ್ರಾಡೂನ್( ಉತ್ತರಾಖಂಡ್) : ಹುಟ್ಟುಹಬ್ಬದ ದಿನ ವ್ಯಕ್ತಿಗೆ ಬೆಲೆ ಬಾಳುವ ಉಡುಗೊರೆಯನ್ನು ಕೊಡುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಗಳು ತಮ್ಮ ತಂದೆ ಹುಟ್ಟುಹಬ್ಬಕ್ಕೆ ಎನ್-95 ಮಾಸ್ಕ್ನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.
ಬೆಂಗಳೂರಲ್ಲಿ ನೆಲೆಸಿರುವ ಉತ್ತರಕಾಶಿ ನಿವಾಸಿಯಾದ ಸಾಕ್ಷಿ ನೇಗಿ ರಾವತ್ ಎಂಬ ಯುವತಿ ಉತ್ತರಾಖಂಡದಲ್ಲಿರುವ ಮುಖ್ಯ ಫಾರ್ಮ್ಸಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿರುವ ತನ್ನ ತಂದೆಗೆ ಎನ್-95 ಮಾಸ್ಕ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಕೊರೊನಾದ ವಿರುದ್ಧ ಹೋರಾಡುತ್ತಿರುವ ತಂದೆಯ ರಕ್ಷಣೆಗೆ ಮುಂದಾಗಿ ಬೆಂಗಳೂರಿನಿಂದ - ಉತ್ತರಾಖಂಡ್ಗೆ ಮಾಸ್ಕ್ ರವಾನಿಸಿದ್ದಾರೆ.
ಏ.16 ರಂದು ಗುರುವಾರ ಸಾಕ್ಷಿ ತಂದೆ ಟ್ರೆಪನ್ ಸಿಂಗ್ ಜನ್ಮದಿನ ಇತ್ತು. ಅಪ್ಪನಿಗೆ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ನೀಡಬೇಕೆಂದು ಯೋಚನೆ ಮಾಡುತ್ತಿದ್ದೆ. ಕೊರೊನಾ ಸಂಬಂಧ ನನ್ನ ಅಪ್ಪನಿಗೆ ಮಾಸ್ಕ್ ನೀಡಲು ನಿರ್ಧರಿಸಿ ಉತ್ತರಕಾಶಿಯ ಡಿಎಂ ಆಗಿರುವ ಆಶೀಶ್ ಚೌಹಾಣ್ ಎಂಬುವವರನ್ನು ಸಂಪರ್ಕಿಸಿ ಅವರ ನೆರವಿನಿಂದ ಎನ್-95 ಮಾಸ್ಕ್ನ್ನು ತನ್ನ ತಂದೆಗೆ ತಲುಪಿಸಿದ್ದೇನೆ ಎಂದು ಸಾಕ್ಷಿ, ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇನ್ನು ಮಗಳಿಂದ ವಿಶೇಷ ಉಡುಗೊರೆ ಪಡೆದ ತಂದೆ ಭಾವುಕರಾಗಿದ್ದಂತೂ ಸುಳ್ಳಲ್ಲ. ತಂದೆ ಮತ್ತು ಮಗಳಿಬ್ಬರು ಸಹಾಯ ಮಾಡಿದ ಉತ್ತಕಾಶಿಯ ಡಿಎಂಗೆ ಧನ್ಯವಾದ ಅರ್ಪಿಸಿದ್ದಾರೆ.