ಸೋನಿಪತ್ (ಹರ್ಯಾಣ): ಮದುವೆಯಾಗಿ ಮನೆಗೆ ಬರುವ ಸೊಸೆಯ ಮೇಲೆ ದಬ್ಬಾಳಿಕೆ ನಡೆಸುವುದು ಕೆಲ ಅತ್ತೆಯರಿಗೆ ಅಘೋಷಿತ ನಿಯಮ. ಹೀಗೆ ಸೊಸೆಯ ಮೇಲೆ ದಬ್ಬಾಳಿಕೆ ನಡೆಸಿದ ಅತ್ತೆ ಈಗ ಜೈಲು ಸೇರಿದ್ದಾರೆ.
ಈ ಘಟನೆ ನಡೆದಿರುವುದು ಹರ್ಯಾಣದ ಸೋನಿಪತ್ ಎಂಬಲ್ಲಿ. ಬಹುಕಾಲದಿಂದಲೂ ತನ್ನ ಸೊಸೆಯ ಮೇಲೆ ದಬ್ಬಾಳಿಕೆ ನಡೆಸುತ್ತಾ, ಹಿಗ್ಗಾಮುಗ್ಗಾ ಥಳಿಸುತ್ತಿದ್ದ ಅತ್ತೆ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಅಂದಹಾಗೆ, ಅತ್ತೆ ಹೇಗೆ ತನ್ನ ಸೊಸೆಗೆ ಕಿರುಕುಳ ನೀಡುತ್ತಿದ್ದಳು ಎಂಬುದನ್ನು ನೆರಮನೆಯರು ವಿಡಿಯೋ ಮಾಡಿ, ಸೊಶಿಯಲ್ ಮೀಡಿಯಾದಲ್ಲಿ ಹರಡಿದ್ದರು. ಇದರಿಂದ ಈ ಅತ್ತೆ ಜೈಲುಪಾಲಾಗುವಂತಾಗಿದೆ.
ವಿಡಿಯೋದಲ್ಲಿರುವಂತೆ, ಮಂಚದ ಮೇಲೆ ಕೂತ ಅತ್ತೆ, ಸೊಸೆಯ ಕೂದಲೆಳೆದು, ಕಪಾಳಕ್ಕೆ ಬಾರಿಸುವ, ತನ್ನ ಊರುಗೋಲಿನಿಂದ ಹೊಡೆಯುವ ದೃಶ್ಯಗಳಿವೆ.
ಹಲವರು ಧೈರ್ಯ ತುಂಬಿದ ನಂತರ ಸೊಸೆ ಈಗ ಮುಂದೆ ಬಂದು ಅತ್ತೆ ಮೇಲೆ ದೂರು ದಾಖಲಿಸಿದ್ದಾರೆ. ಬಹುಕಾಲದಿಂದಲೂ ಅತ್ತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತನಗೆ ಹಿಂಸೆ ನೀಡುತ್ತಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಅತ್ತೆಯನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.