ನವದೆಹಲಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ನಾಳೆ ಮುಂಬೈ ಕರಾವಳಿ ಪ್ರದೇಶಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ.
ಗೋವಾದ ಪಶ್ಚಿಮ ದಿಕ್ಕಿನತ್ತ 300 ಕಿಲೋ ಮೀಟರ್, ದಕ್ಷಿಣ, ನೈರುತ್ಯ ಮುಂಬೈನಿಂದ 550, ಸೂರತ್‌ನಿಂದ 770 ಕಿಲೋ ಮೀಟರ್ ದೂರದಲ್ಲಿ ವಾಯುಭಾರ ಕುಸಿತವಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಮುಂದಿನ 12 ಗಂಟೆಗಳಲ್ಲಿ ದಕ್ಷಿಣ ಮುಂಬೈನ ಕಾರಾವಳಿ ಪ್ರದೇಶದ ಅಲಿಬಾಗ್ ಸಮೀಪದಲ್ಲಿ ನಿಸರ್ಗ ಚಂಡಮಾರುತ ಅಪ್ಪಳಿಸಲಿದೆ ಎಂದು ಪುಣೆ ವಿಭಾಗದ ಹವಾಮಾನ ಇಲಾಖೆ ಅಧಿಕಾರಿ ಡಾ. ಅನುಪಮ್ ಕಶ್ಯಪ್ ತಿಳಿಸಿದ್ದಾರೆ.
ಅಲಿಬಾಗ್ ಪ್ರದೇಶದಲ್ಲಿ ಅಪ್ಪಳಿಸಿದ ಕೂಡಲೇ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಪಾಲ್ಘರ್, ಪುಣೆ, ಥಾಣೆ, ಮುಂಬೈ, ರಾಯ್‌ಗಢ್, ಧುಲೇ ಮತ್ತು ನಂದೂರ್‌ಬಾರ್, ನಾಸಿಕ್‌ನಲ್ಲಿ ನಾಳೆ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಕರಾವಳಿ ಪ್ರದೇಶದ ಹರಿಹರೇಶ್ವರ, ದಾಮನ್‌ಗೆ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್ ಮತ್ತು ಪೊಲೀಸರು ಗುಜರಾತ್‌ನ ನವ್‌ಸಾರಿ ಜಿಲ್ಲೆಯ ಮೆಂಧಾರ್ ಮತ್ತು ಭಟ್ ಗ್ರಾಮಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.