ಹೈದರಾಬಾದ್: ಕೊರೊನಾ ಸಾಂಕ್ರಾಮಿಕ ನಮ್ಮ ಬದುಕು ಮತ್ತು ಕೆಲಸದ ಅಭ್ಯಾಸಗಳಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ತಂಡದ ಕೆಲಸ ( ಟೀಂ ವರ್ಕ್ ) ಎಂಬ ವಿಧಾನದಿಂದ ನಿಧಾನಕ್ಕೆ ನಾವು ‘ ದೂರಸಂಪರ್ಕ ಕಾಯಕ ’ ( ರಿಮೋಟ್ ವರ್ಕ್ ) ಎಂಬ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದರಿಂದಾಗಿ ಸೈಬರ್ ಸುರಕ್ಷತೆ ಆತಂಕದಲ್ಲಿದೆ.
ಮೈಕ್ರೋಸಾಫ್ಟ್ ಡಿಜಿಟಲ್ ಅಪರಾಧ ಘಟಕ ಏಷ್ಯಾ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾದ, ಸಹಾಯಕ ಜನರಲ್ ಕೌನ್ಸೆಲ್ ಮೇರಿ ಜೋ ಶ್ರೇಡ್ ಅವರ ಸಂದರ್ಶನ ಇಲ್ಲಿದೆ. ಜಗತ್ತು ನಿಧಾನವಾಗಿ ದೂರಸಂಪರ್ಕ ಕಾಯಕಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ವರ್ಚುವಲ್ ಭದ್ರತೆಯ ಮಹತ್ವದ ಬಗ್ಗೆ ಅವರು ವಿವರಣೆ ನೀಡಿದ್ದಾರೆ.
ಎಲ್ಲಿಂದಲಾದರೂ ಕೆಲಸ ಮಾಡಿ ( ವರ್ಕ್ ಫ್ರಮ್ ಎನಿವೇರ್ ) ಎಂಬ ಪರಿಕಲ್ಪನೆ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ಇದು ಎಷ್ಟು ಸುರಕ್ಷಿತ ?
ಕಳೆದ ಕೆಲವು ತಿಂಗಳುಗಳಲ್ಲಿ ವಿವಿಧ ಕೈಗಾರಿಕೆಗಳು ಮತ್ತು ನಿಗಮಗಳು ಕೆಲಸ ಮಾಡುವ ವಿಧಾನ ತೀವ್ರ ರೀತಿಯಲ್ಲಿ ಬದಲಾಗುತ್ತಿದೆ. ಮನೆಯಿಂದ ಕೆಲಸ ( ವರ್ಕ್ ಫ್ರಂ ಹೋಮ್ ) ಎಂಬ ಕಲ್ಪನೆ ಸಾಮಾನ್ಯವಾಗಿದೆ. ಪ್ರಮುಖ ವಾಣಿಜ್ಯ ಸಭೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಇದು ಸ್ಪೂರ್ತಿದಾಯಕ ಬದಲಾವಣೆ. ಆದರೆ ಇದು ಸುರಕ್ಷಿತವಾಗಿ ಮುಂದುವರಿಯುತ್ತದೆಯೇ ಎಂಬುದು ಚರ್ಚೆಗೆ ಆಸ್ಪದ ನೀಡುತ್ತಿರುವ ಸಂಗತಿ. ಈ ದಿನಗಳಲ್ಲಿ ನಾವು ಸ್ವೀಕರಿಸುವ ಬಹುತೇಕ ಎಸ್ ಎಂ ಎಸ್ ಗಳು ಮತ್ತು ಇ- ಮೇಲ್‌ಗಳು ಕೋವಿಡ್ - 19 ಕುರಿತಾಗಿ ಇರುತ್ತವೆ. ಆದರೆ ಸೈಬರ್ ದಾಳಿಯ ಬಗ್ಗೆ ನಾವು ಎರಡೆರಡು ಬಾರಿ ಯೋಚಿಸದೆ ಲಿಂಕುಗಳ ಮೇಲೆ ಕ್ಲಿಕ್ ಮಾಡುತ್ತೇವೆ. ಈ ದೌರ್ಬಲ್ಯದ ಲಾಭವನ್ನು ದಾಳಿಕೋರರು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಾಳಿಗಳು ಪ್ರತಿ ದೇಶದಲ್ಲಿ ಸಾಮಾನ್ಯ ಆಗಿಬಿಟ್ಟಿದೆ ಎನ್ನುತ್ತದೆ ಮೈಕ್ರೋಸಾಫ್ಟ್ ಇಂಟೆಲಿಜೆನ್ಸ್ ಘಟಕದ ಮಾಹಿತಿ . ದಾಳಿಕೋರರು ರ್ಯಾನ್ಸಮ್ವೇರ್, ಫಿಶಿಂಗ್ ಇಮೇಲ್ ಮತ್ತಿತರ ಮಾಲ್‌ವೇರ್‌ಗಳನ್ನು ಕಳಿಸುತ್ತಿದ್ದಾರೆ. ನಾವು ಆ ಲಿಂಕ್ಗಳಲ್ಲಿ ಯಾವುದನ್ನಾದರೂ ಕ್ಲಿಕ್ ಮಾಡಿದ ತಕ್ಷಣ, ಅವರು ನಮ್ಮ ಮೇಲ್ ಬಾಕ್ಸಿಗೆ ನುಸುಳುತ್ತಾರೆ ಮತ್ತು ಬ್ಯಾಂಕ್ ಪಾಸ್‌ವರ್ಡ್‌ಗಳಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯುತ್ತಾರೆ.
ವೀಡಿಯೊ ಮತ್ತು ಆಡಿಯೊ ಕಾನ್ಫರೆನ್ಸುಗಳಲ್ಲಿ ಭಾಗಿ ಆಗುವಾಗ ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು?
ಅಂತಹ ಆನ್‌ಲೈನ್ ಕಾನ್ಫರೆನ್ಸ್ಗಳ ಸಮಯದಲ್ಲಿ, ಕಾನ್ಫರೆನ್ಸಿಗೆ ಯಾರು ಹಾಜರಾಗಬಹುದು ಮತ್ತು ಯಾರು ಮಾಹಿತಿ ಪಡೆಯಬಹುದು ಎಂಬುದನ್ನು ನಿಯಂತ್ರಿಸಲು ಮತ್ತು ನಿರ್ಧರಿಸಲು ಕಾನ್ಫರೆನ್ಸ್ ಸಂಘಟಿಸುವವರಿಗೆ ಅಧಿಕಾರ ನೀಡಬೇಕು. ಸಂಘಟಕರು ಅಥವಾ ಪಾಲ್ಗೊಳ್ಳುವವರನ್ನು ಹೊರತುಪಡಿಸಿ ಬೇರೆ ಮಂದಿ ಕಾನ್ಫರೆನ್ಸಿಗೆ ನುಗ್ಗಿ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇದೆ. ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಿದ್ದರೆ, ಸಭೆಯ ಪ್ರಾರಂಭಕ್ಕೂ ಮೊದಲು ಪಾಲ್ಗೊಳ್ಳುವವರಿಗೆ ಅದರ ಬಗ್ಗೆ ಅರಿವು ಮೂಡಿಸಬೇಕು. ರೆಕಾರ್ಡ್ ಮಾಡಿದ ಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡಿದ ರೆಪೊಸಿಟರಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ ಇಡಬೇಕು. ಈ ಫೈಲ್‌ಗಳನ್ನು ಸಂಘಟಕರು, ಪಾಲ್ಗೊಳ್ಳುವವರು ಮತ್ತು ಆಹ್ವಾನಿತರಿಗೆ ಮಾತ್ರ ಲಭ್ಯ ಆಗುವಂತೆ ಮಾಡಬೇಕು.
‘ದೂರಸಂಪರ್ಕ ಕಾಯಕ’ದ ಭಾಗವಾಗಿ ಆನ್‌ಲೈನ್ ಪರಿಕರಗಳನ್ನು ಬಳಕೆ ಮಾಡುವಾಗ, ಯಾರಾದರೂ ನಮ್ಮ ಖಾಸಗಿ ಅಥವಾ ವೃತ್ತಿಪರ ಮಾಹಿತಿಯನ್ನು ಕದಿಯಬಹುದೇ?
ಸೈಬರ್ ಅಪರಾಧಿಗಳು ಯಾವಾಗಲೂ ದೌರ್ಬಲ್ಯಗಳ ಲಾಭ ಪಡೆಯಲೆಂದೇ ಇರುತ್ತಾರೆ. ಅವರ ಗಮನ ದುರ್ಬಲವಾದ ಬಳಕೆದಾರರ ಹೆಸರುಗಳು ಮತ್ತು ಪಾಸ್‌ವರ್ಡ್‌ಗಳ ಮೇಲೆ ಇರುತ್ತದೆ. ಈ ದಾಳಿಯಿಂದ ಪಾರಾಗಲು ಸಂಸ್ಥೆಗಳು ಎರಡು ಅಥವಾ ಮೂರು ಹಂತದ ದೃಢೀಕರಣ ವ್ಯವಸ್ಥೆಯನ್ನು ಒದಗಿಸಬಹುದು. ಮಲ್ಟಿ-ಫ್ಯಾಕ್ಟರ್ ದೃಢೀಕರಣ ( ಎಂಎಫ್‌ಎ ) ಎಂಬುದು ಆನ್‌ಲೈನ್ ಬ್ಯಾಂಕಿಂಗ್‌ನಂತಹ ಅನೇಕ ಗ್ರಾಹಕ ಅಪ್ಲಿಕೇಶನ್‌ಗಳು ಬಳಸುವ ಸರಳವಾದ ಎರಡು - ಹಂತದ ಪರಿಶೀಲನಾ ಪ್ರಕ್ರಿಯೆ ಆಗಿದೆ. ಆನ್‌ಲೈನ್ ಕೊಲಾಬೊರೇಷನ್ ಟೂಲ್ ಗಳ ವಿಷಯಕ್ಕೆ ಬಂದರೆ, ಹೆಚ್ಚುವರಿ ಭದ್ರತೆಗಾಗಿ ಮಾಹಿತಿ ತಂತ್ರಜ್ಞಾನ ನಿರ್ವಾಹಕರು ಎಂ ಎಫ್ ಎ ಎನ್ನು ಆನ್ ಮಾಡಬೇಕು. ಡಿವೈಸ್ಗಳು ಮತ್ತು ಕ್ಲೌಡ್ ನಡುವಿನ ಎಲ್ಲಾ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಅವರು ಉದ್ಯಮ ಗುಣಮಟ್ಟದ ತಂತ್ರಜ್ಞಾನಗಳಾದ ಟ್ರಾನ್ಸ್ಪೋರ್ಟ್ ಲೇಯರ್ ಸೆಕ್ಯುರಿಟಿ ( ಟಿ ಎಲ್ ಎಸ್ ) ಮತ್ತು ಸೆಕ್ಯೂರ್ ರಿಯಲ್-ಟೈಮ್ ಟ್ರಾನ್ಸ್ಪೋರ್ಟ್ ಪ್ರೊಟೊಕಾಲ್ ( ಎಸ್ ಆರ್ ಟಿ ಪಿ ) ಅನ್ನು ಸಂಯೋಜಿಸಬೇಕು.
ನಾವು ಯಾವ ರೀತಿಯ ಆನ್‌ಲೈನ್ ಕೊಲಾಬರೇಷನ್ ಟೂಲ್ಗಳನ್ನು ಆಯ್ದುಕೊಳ್ಳಬೇಕು?
ನಿಮ್ಮ ಸಂಸ್ಥೆಗಾಗಿ ಸರಿಯಾದ ಕೊಲಾಬರೇಷನ್ ಟೂಲ್ ಆಯ್ಕೆಮಾಡುವಾಗ, ಬಳಕೆದಾರರ ಡೇಟಾವನ್ನು ಪತ್ತೆಹಚ್ಚದ, ಚಂದಾದಾರಿಕೆಯನ್ನು ಮುಕ್ತಾಯಗೊಳಿಸಿದ ನಂತರ ಎಲ್ಲಾ ಡೇಟಾವನ್ನು ಅಳಿಸುವ ಮತ್ತು ಗ್ರಾಹಕರಿಗೆ ಗ್ರಾಹಕರ ಡೇಟಾದ ಮಾಲೀಕತ್ವವನ್ನು ನೀಡುವ ಟೂಲ್ ಬಳಸಬೇಕು.
ವರ್ಕ್ ಫ್ರಂ ಎನಿವೇರ್ ಎಂಬುದು ಇನ್ನು ಮುಂದೆ ಸಾಮಾನ್ಯ ಆಗಲಿದೆಯೇ ?
ಪ್ರಸ್ತುತ ಸಂದರ್ಭಗಳಲ್ಲಿ ವರ್ಕ್ ಫ್ರಮ್ ಎನಿವೇರ್ ಕಡ್ಡಾಯ ಆಗಿದೆ. ಸಾಂಕ್ರಾಮಿಕ ರೋಗಕ್ಕೆ ಪರಿಹಾರ ಸಿಕ್ಕರೂ ಕೂಡ ಕೂಡ ಹೊಂದಾಣಿಕೆಯ ಕೆಲಸದ ಪರಿಸ್ಥಿತಿಗಳು ಮುಂದುವರಿಯಬಹುದು. ಸಂಸ್ಥೆಗಳು ಇದಕ್ಕೆ ಅಣಿಯಾಗಬೇಕು ಮತ್ತು ಸೈಬರ್ ಸುರಕ್ಷತೆಯತ್ತ ಗಮನ ಹರಿಸಬೇಕು. ದೂರಸಂಪರ್ಕ ಕಾಯಕದ ಅಗತ್ಯಗಳನ್ನು ಸುರಕ್ಷತೆಯೊಂದಿಗೆ ಸಮತೋಲನಗೊಳಿಸಿದರೆ ಅದಕ್ಕೆ ಅಡ್ಡಿ ಆತಂಕ ಇರದು.