ಗುವಾಹಟಿ(ಅಸ್ಸೋಂ): ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿ ಆರಂಭಗೊಂಡ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಇಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸಡಿಲಿಸಲಾಗಿದೆ.
ಗುವಾಹಟಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿತ್ತು. ಎಲ್ಲೆಡೆ ಮಸೂದೆ ಅಂಗೀಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಮಸೂದೆ ವಿರುದ್ಧ ಎಎಎಸ್‌ಯು ಕರೆ ನೀಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಗುವಾಹಟಿಯ ಚಾಂದಮರಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಹೀಗಿದ್ದರೂ, ದಿಬ್ರುಗರ್ ಪುರಸಭೆ ಪ್ರದೇಶದಲ್ಲಿ ಜಾರಿಯಲ್ಲಿದ್ದ ಅನಿರ್ದಿಷ್ಟಾವಧಿ ಕರ್ಫ್ಯೂವನ್ನು ಶುಕ್ರವಾರ 5 ಗಂಟೆಗಳ ಕಾಲ ಸಡಿಲಿಸಲಾಗಿತ್ತು. ಇಂದು ಮತ್ತೆ ಗುವಾಹಟಿಯಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು 7 ಗಂಟೆಗಳ ಕಾಲ ಸಡಿಲಿಸಲಾಗಿದೆ.
ಇನ್ನೊಂದೆಡೆ ಇಂದು ನಾಗಾ ವಿದ್ಯಾರ್ಥಿ ಸಂಘಟನೆ(ಎನ್ಎಸ್ಎಫ್) ಮಸೂದೆ ವಿರುದ್ಧ 6 ಗಂಟೆಗಳ ಕಾಲ ಬಂದ್ಗೆ ಕರೆ ನೀಡಿದೆ.