ನವದೆಹಲಿ: ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಇಂದು ಸಭೆ ಸೇರಲಿದೆ. ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮುಖ್ಯ ವಕ್ತಾರ ರಂದೀಪ್ ಸುರ್ಜೇವಲಾ ಟ್ವೀಟ್ ಮಾಡಿದ್ದಾರೆ.
ಸಭೆಯಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿಯ ವಾಟ್ಸ್ಆ್ಯಪ್ ಚಾಟ್ ಸೋರಿಕೆ ವಿಷಯ, ರೈತ ಚಳವಳಿ ಮತ್ತು ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಪಕ್ಷದ ಕಾರ್ಯತಂತ್ರ ರೂಪಿಸುವಿಕೆ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.ಮಧುಸೂದನ್ ಮಿಸ್ತ್ರಿ ಅವರ ಅಧ್ಯಕ್ಷತೆಯ ಕೇಂದ್ರ ಚುನಾವಣಾ ಪ್ರಾಧಿಕಾರವು ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಚುನಾವಣೆಯ ಕುರಿತು ಕೆಲವು ಶಿಫಾರಸುಗಳನ್ನು ಮಾಡಿದೆ.
ಇನ್ನು ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚೌಹಾಣ್, ಕಪಿಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರ ಒಂದು ಗುಂಪು ಪೂರ್ಣಾವಧಿಗೆ ಮತ್ತು ಸಕ್ರಿಯ ಪಕ್ಷದ ಅಧ್ಯಕ್ಷನ ಆಯ್ಕೆಗೆ ಬೇಡಿಕೆ ಇಟ್ಟಿದ್ದು, ಪಕ್ಷದಲ್ಲಿ ಪ್ರಮುಖ ಬದಲಾವಣೆಗಳನ್ನು ಕೋರಿ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಜೊತೆಗೆ ಪಕ್ಷದ ಕೆಲವು ಯುವ ನಾಯಕರು, ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಎಐಸಿಸಿ, ನಿಯಮಿತ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೊದಲು ಮಧ್ಯಂತರ ಅಧ್ಯಕ್ಷರನ್ನು ನೇಮಿಸಬಹುದು ಎನ್ನಲಾಗಿದೆ. ಆದರೆ 2019 ರ ಲೋಕಸಭಾ ಚುನಾವಣೆಯ ಸೋಲಿನ ನಂತರ ತಾವು ಪಕ್ಷದ ಅಧ್ಯಕ ಹುದ್ದೆಗೆ ಮತ್ತೊಮ್ಮೆ ಮರಳುವ ಬಗ್ಗೆ ರಾಹುಲ್ ಗಾಂಧಿ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಇಂದಿನ ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಇನ್ನು ಕಳೆದ ತಿಂಗಳು ಸೋನಿಯಾ ಗಾಂಧಿ ಪತ್ರ ಬರೆದಿದ್ದ ಕಾಂಗ್ರೆಸ್ನ ಕೆಲವು ನಾಯಕರನ್ನು ಭೇಟಿ ಮಾಡಿ ಅವರು ಎತ್ತಿದ ವಿಷಯಗಳ ಬಗ್ಗೆ ಚರ್ಚಿಸಿದ್ದರು.
ಇದನ್ನೂ ಓದಿ:ಸ್ಫೋಟಗೊಂಡ ಕಲ್ಲುಗಣಿಗಾರಿಕೆ ಸಕ್ರಮವಾಗಿದೆ, ತನಿಖೆಯಿಂದ ಸತ್ಯಸಂಗತಿ ಹೊರಬರಲಿದೆ: ಸಚಿವ ಈಶ್ವರಪ್ಪ