ನವದೆಹಲಿ: ಸಿಬ್ಬಂದಿ (ಜವಾನ್) ಮೇಲೆ ಬಿಸಿನೀರು ಎರಚಿದ ಆರೋಪ ಹೊತ್ತಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಡಿ.ಕೆ. ತ್ರಿಪಾಠಿ ಅವರನ್ನು ಬಿಹಾರದಿಂದ ಮಣಿಪುರಕ್ಕೆ ವರ್ಗಾಯಿಸಲಾಗಿದೆ. ಜನವರಿ 2 ರಂದು ಬಿಹಾರದ ರಾಜ್‌ಗೀರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮುಖದ ಮೇಲೆ ತೀವ್ರ ಸ್ವರೂಪದ ಸುಟ್ಟ ಗಾಯವಾದ ಕಾರಣ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನೇಮಕಾತಿ ಚಾಲನೆಯಲ್ಲಿದ್ದ ತ್ರಿಪಾಠಿ, ಕುಡಿಯಲು ಬಿಸಿ ನೀರು ತರುವಂತೆ ಅಲ್ಲಿನ ಸಿಬ್ಬಂದಿ ಅನ್ಮೋಲ್ ಖರತ್ ಅವರಿಗೆ ಹೇಳಿದ್ದರು. ಆದರೆ ಸಿಬ್ಬಂದಿ ಕುದಿಯುವ ನೀರು ತಂದಿದ್ದಕ್ಕಾಗಿ ಅವರ ಮೇಲೆ ಎಸೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಜನವರಿ 10 ರಂದು ವರದಿ ಸಲ್ಲಿಸುವಂತೆ ಸಿಆರ್‌ಪಿಎಫ್ ಐಜಿ ಶ್ರೇಣಿಯ ಅಧಿಕಾರಿಗೆ ತಿಳಿಸಲಾಗಿತ್ತು.