ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2018ರ ಅಪರಾಧ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿ ಮಹಿಳೆಯರ ವಿರುದ್ಧ 3,78,277 ಅಪರಾಧ ಪ್ರಕರಣಗಳು ವರದಿಯಾಗಿವೆ. 2017ರಲ್ಲಿ ಈ ಸಂಖ್ಯೆ 3,59,849 ಇತ್ತು.
3.78 ಲಕ್ಷ ಪ್ರಕರಣಗಳ ಪೈಕಿ 59,445 ಪ್ರಕರಣಗಳೊಂದಿಗೆ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ.
ವರದಕ್ಷಿಣೆ ಕಿರುಕುಳದ ಸಾವಿನಲ್ಲಿಯೂ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದು, 2018ರಲ್ಲಿ ಒಟ್ಟು 2,444 ವರದಕ್ಷಿಣೆ ಕಿರುಕುಳದ ಸಾವಾಗಿದೆ. ಆದರೆ, 2017ಕ್ಕೆ ಹೋಲಿಸಿದರೆ ಇದು ಶೇಕಡಾ 3ರಷ್ಟು ಇಳಿಕೆ ಕಂಡಿದೆ. 2017ರಲ್ಲಿ ವರದಕ್ಷಿಣೆ ಕಿರುಕುಳದಿಂದ 2,524 ಮಂದಿ ಅಸು ನೀಗಿದ್ದರು.
ಹೆಚ್ಚಿನ ಜನಸಂಖ್ಯೆಯಿಂದಾಗಿ ಹಲವಾರು ಅಪರಾಧಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ ಎಂದು ರಾಜ್ಯದ ಅಧಿಕಾರಿಗಳು ಹೇಳುತ್ತಿದ್ದಾರೆ.