ನವದೆಹಲಿ: ಕೋವಿಡ್ ಬಿಕ್ಕಟ್ಟಿನಿಂದ ಇಡೀ ದೇಶದ ಜನತೆ ಸಂಕಷ್ಟದಲ್ಲಿರುವಾಗ ಕಾರ್ಪೊರೇಟ್ ಸಂಸ್ಥೆಗಳ ಸಾಲಗಳನ್ನು ಕೇಂದ್ರ ಸರ್ಕಾರ ರೈಟ್ ಆಫ್ ಮಾಡಿದ್ದು ದುರದೃಷ್ಟಕರ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.
"ಆರ್ಬಿಐಗೆ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಗೆ ಬಂದ ಉತ್ತರದ ಪ್ರಕಾರ, ಸೆಪ್ಟೆಂಬರ್ 30, 2019 ರಲ್ಲಿದ್ದಂತೆ 50 ಸಾಲ ಬಾಕಿದಾರರ 68,607 ಕೋಟಿ ರೂ. ಮೊತ್ತವನ್ನು ರೈಟ್ ಆಫ್ ಮಾಡಲಾಗಿದೆ. ಹೀಗೆ ಬ್ಯಾಂಕುಗಳು ರೈಟ್ ಆಫ್ ಮಾಡುವುದು ಆಗಾಗ ನಡೆಯುವ ಪ್ರಕ್ರಿಯೆಯೇ ಆಗಿದ್ದರೂ, ಇದನ್ನು ಮಾಡಿದ ಸಮಯ ಸೂಕ್ತವಾಗಿಲ್ಲ. ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ದೇಶದ ಲಕ್ಷಾಂತರ ಜನ ಜೀವನೋಪಾಯ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಉದ್ದೇಶಪೂರ್ವಕ ಸಾಲ ಬಾಕಿದಾರರ ಸಾಲಗಳನ್ನು ರೈಟ್ ಆಫ್ ಮಾಡಿದೆ" ಎಂದು ಡಿ. ರಾಜಾ ವಾಗ್ದಾಳಿ ನಡೆಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದ ಅನುತ್ಪಾದಕ ಸಾಲಗಳ ಕುರಿತು ಸಿಪಿಐ ಕಾಲಕಾಲಕ್ಕೆ ಸರ್ಕಾರವನ್ನು ಎಚ್ಚರಿಸುತ್ತ ಬಂದಿದೆ. ಈ ಸಾಲಗಳ ಮರುಪಾವತಿಗೆ ಸೂಕ್ತ ಕ್ರಮಗಳಿಗಾಗಿ ನಾವು ಆಗ್ರಹಿಸುತ್ತಲೇ ಇದ್ದೇವೆ. 2004 ರಲ್ಲಿ ಯುಪಿಎ-1 ರ ಅವಧಿಯಲ್ಲಿ ಅನುತ್ಪಾದಕ ಸಾಲಗಳ ಪ್ರಮಾಣ 51,500 ಕೋಟಿ ರೂ. ಇತ್ತು. 2009 ರಲ್ಲಿ ಯುಪಿಎ-2 ಅವಧಿಯಲ್ಲಿ ಇದರ ಪ್ರಮಾಣ 45,000 ಕೋಟಿ ರೂ. ಗಳಾಗಿತ್ತು. 2014 ರಲ್ಲಿ ಎನ್ಡಿಎ-1 ಅವಧಿಯಲ್ಲಿ ಇದು 2,16,000 ಕೋಟಿ ರೂ. ಹಾಗೂ 2019 ರಲ್ಲಿ ಎನ್ಡಿಎ-2 ಅವಧಿಯಲ್ಲಿ 7,40,000 ಕೋಟಿ ರೂ.ಗಳಿಗೆ ಏರಿಕೆಯಾಯಿತು ಎಂದು ರಾಜಾ ಮಾಹಿತಿ ನೀಡಿದರು.
ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳಾದ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಕ್ರಂ ಕೋಠಾರಿ ಮತ್ತು ಇನ್ನೂ ಹಲವರು ಬ್ಯಾಂಕ್, ಆರ್ಬಿಐ ಹಾಗೂ ಸರ್ಕಾರದ ಕುಮ್ಮಕ್ಕಿನಿಂದಲೇ ಲಾಭ ಪಡೆದುಕೊಂಡಿದ್ದಾರೆ. ಇಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಡಿ. ರಾಜಾ ಒತ್ತಾಯಿಸಿದರು.