ನವದೆಹಲಿ : ಕೊರೊನಾ ವೈರಸ್ಗೆ ಲಸಿಕೆ ಮುಂದಿನ ವರ್ಷದ ಮೊದಲ ಮೂರು ತಿಂಗಳ ಒಳಗೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹರ್ಷವರ್ಧನ್ ಭರವಸೆ ನೀಡಿದ್ದಾರೆ.
ಈವರೆಗೆ ಲಸಿಕೆ ಬಿಡುಗಡೆಗೆ ಯಾವುದೇ ದಿನಾಂಕ ನಿಗದಿಪಡಿಸಿಲ್ಲ. ಆದರೂ, ಲಸಿಕೆ ಬಂದ ಮೊದಲಿಗೆ ಹಿರಿಯ ನಾಗರಿಕರು ಹಾಗೂ ಅಪಾಯದ ಸಾಧ್ಯತೆ ಹೆಚ್ಚಿರುವ ರೋಗಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸಿದರು.
ಲಸಿಕೆಯ ಬಗ್ಗೆ ಇರುವ ರಾಷ್ಟ್ರೀಯ ಪರಿಣಿತರ ಗುಂಪು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಲ್ಲಾ ರೀತಿಯ ಯೋಜನೆ ಸಿದ್ಧಪಡಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರ ಜೊತೆಗೆ ಕೋವಿಡ್ ಲಸಿಕೆ ಪರೀಕ್ಷೆಗೆ ಮಾನವನ ಮೇಲೆಯೂ ಪ್ರಯೋಗ ಮಾಡುವ ವೇಳೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಲಸಿಕೆಗೆ ಭದ್ರತೆ, ವೆಚ್ಚ, ಬೆಲೆ, ಉತ್ಪಾದನೆ, ಮುಂತಾದ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. ಬಿಡುಗಡೆಯಾಗುವ ಲಸಿಕೆಯ ಮೇಲೆ ಜನರಿಗೆ ವಿಶ್ವಾಸದ ಕೊರತೆಯಿದ್ರೆ ಮೊದಲ ಲಸಿಕೆಯನ್ನು ತಾವೇ ತೆಗೆದುಕೊಳ್ಳಲು ಸಂತೋಷ ಪಡುತ್ತೇನೆ ಎಂದು ಈ ವೇಳೆ ಉಲ್ಲೇಖಿಸಿದರು.