ಹೈದರಾಬಾದ್: ವಿಶ್ವದಲ್ಲಿ ಸುಮಾರು 11 ಮಿಲಿಯನ್ ಜನರಿಗೆ ಅಂಟಿರುವ ಜಾಗತಿಕ ಮಹಾಮಾರಿ ಕೊರೊನಾವನ್ನು ನಾಶಪಡಿಸಲು ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಕೆಲ ರಾಷ್ಟ್ರಗಳ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು, ಔಷಧೀಯ ಕಂಪನಿಗಳು ಇದಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಸುತ್ತಿದೆ.
ಇದೀಗ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ 'ಕೊವಾಕ್ಸಿನ್' ಹೆಸರಿನ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿದಿದೆ. ಇದು ಭಾರತ ಅಭಿವೃದ್ಧಿಪಡಿಸಿರುವ ಮೊದಲ ದೇಶೀಯ ಲಸಿಕೆಯಾಗಿದೆ. ಅಲ್ಲದೇ ಆಗಸ್ಟ್ 15ರ ಒಳಗೆ ಈ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಫಲಿತಾಂಶವನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಆ.15ರೊಳಗೆ ಕ್ಲಿನಿಕಲ್ ಪ್ರಯೋಗದ ಫಲಿತಾಂಶ:
ಹೌದು.., ತ್ವರಿತಗತಿಯಲ್ಲಿ ಕೋವಿಡ್ ಲಸಿಕೆ 'ಕೊವಾಕ್ಸಿನ್'ನ ಕ್ಲಿನಿಕಲ್ ಪ್ರಯೋಗವನ್ನು ಕೈಗೊಂಡು, ಇದರ ಫಲಿತಾಂಶವನ್ನು ಆಗಸ್ಟ್ 15ರ ಒಳಗಾಗಿ ಬಿಡುಗಡೆ ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಎಲ್ಲ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡ ನಂತರ ಲಸಿಕೆಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪುಣೆ - ಐಸಿಎಂಆರ್ ಮತ್ತು ಬಿಬಿಐಎಲ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಕೊವಾಕ್ಸಿನ್ನ ಕ್ಲಿನಿಕಲ್ ಪ್ರಯೋಗಕ್ಕಾಗಿ ಭಾರತ್ ಬಯೋಟೆಕ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜೆಐ), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ಕೂಡ ನೀಡಿತ್ತು. ಇದು ಕೋವಿಡ್ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗ ನಡೆಸಲಿದೆ.
ಲಸಿಕೆ ಯಶಸ್ವಿಗೆ ಭಾರತ ಅನುಸರಿಸುವ ಮಾರ್ಗ:
ಈ ಹಿಂದೆ ಭಾರತ ಸರ್ಕಾರವು, ದೇಶೀಯ ಔಷಧ ಸಂಸ್ಥೆಗಳಿಗೆ ತ್ವರಿತವಾಗಿ ಲಸಿಕೆ ಅಭಿವೃದ್ಧಿ ಪಡಿಸಲು ಸಹಾಯ ಮಾಡಲು 1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಅನ್ನು ಸ್ವಲ್ಪ ಸಡಿಲಿಕೆ ಮಾಡಿತ್ತು. ಆದರೂ ಕೂಡ ಲಸಿಕೆಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಮೊದಲು ಕ್ಲಿನಿಕಲ್ ಪ್ರಯೋಗಗಳು ಅಗತ್ಯವಾಗಿದ್ದು, ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿಯೇ ಉಳಿದಿವೆ. ಮೂರು ಹಂತಗಳಲ್ಲಿ ನಡೆಯುವ ಈ ಪ್ರಕ್ರಿಯೆಯು ಕನಿಷ್ಠ ಆರು ತಿಂಗಳುಗಳ ಸಮಯ ತೆಗೆದುಕೊಳ್ಳುತ್ತದೆ. ಆದರೂ ಕೊವಾಕ್ಸಿನ್, ದೇಶೀಯ ಲಸಿಕೆಯಾಗಿರುವುದರಿಂದ ಹಾಗೂ ತುರ್ತು ಆರೋಗ್ಯ ಪರಿಸ್ಥಿತಿಯ ದೃಷ್ಟಿಯಿಂದ ತ್ವರಿತಗತಿಯಲ್ಲಿ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಸೂಚಿಸಲಾಗಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ ಅವರು, ಸಾಮಾನ್ಯವಾಗಿ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಲು 14 -15 ವರ್ಷಗಳು ಬೇಕು, ಆದರೆ ಈಗ ಒಂದು ವರ್ಷದೊಳಗೆ ಅಭಿವೃದ್ಧಿಪಡಿಸಬಹುದಾಗಿದೆ ಎಂದು ಹೇಳಿದ್ದಾರೆ.
ಭಾರತ್ ಬಯೋಟೆಕ್ ನಡೆಸುತ್ತಿರುವ ಈ ಕ್ಲಿನಿಕಲ್ ಪ್ರಯೋಗವು ಮೊದಲ ಹಂತದಲ್ಲಿ 28 ದಿನಗಳು ನಡೆಯಲಿದೆ. ಮೊದಲು ಕೋವಿಡ್ನಿಂದ ಗುಣಮುಖಗೊಂಡ ವ್ಯಕ್ತಿಯನ್ನು ಮೇಲೆ ಸೆರೋಲಜಿ ವಿಶ್ಲೇಷಣೆ ಮಾಡಲಾಗುತ್ತದೆ. ಆರ್ಟಿ - ಪಿಸಿಆರ್ ಪರೀಕ್ಷೆಯ ಬಳಿಕ ಡೋಸೇಜ್ ನೀಡಲಾಗುತ್ತದೆ. 28 ದಿನಗಳ ಬಳಿಕ ಎರಡನೇ ಹಂತದಲ್ಲಿ ಸೆರೋಲಜಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ವೈರಸ್ಗಳು ಹರಡದಂತೆ ತಡೆಯುತ್ತದೆ. ಇದನ್ನು ತಟಸ್ಥೀಕರಣ ಎಂದು ಕರೆಯಲಾಗುತ್ತದೆ. ಇದರ ಬಳಿಕ ಮುಂದಿನ ಹಂತಕ್ಕೆ ಹೋಗುತ್ತೇವೆ ಎಂದು ಕೃಷ್ಣ ಎಲ್ಲ ಮಾಹಿತಿ ನೀಡಿದ್ದಾರೆ.
ಪ್ರಸ್ತುತ, ವಿಶ್ವದಾದ್ಯಂತ ವಿವಿಧ ಹಂತಗಳಲ್ಲಿ ಸುಮಾರು 140 ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ಈ ಪೈಕಿ ಮಾನವನ ಮೇಲೆ ಪ್ರಯೋಗಿಸುವ ಹಂತದಲ್ಲಿ 10 ಲಸಿಕೆಗಳಿವೆ. ತಜ್ಞರ ಪ್ರಕಾರ ಇವು ಕೊರೊನಾ ಲಸಿಕೆಯು 2021ರ ಆರಂಭದಲ್ಲಿ ಮಾರುಕಟ್ಟೆಗೆ ಬರಬಹುದು. ಆದರೆ 'ಕೊವಾಕ್ಸಿನ್' ಯಶಸ್ವಿಯಾದರೆ ಎಲ್ಲದಕ್ಕೂ ಮೊದಲೇ ಭಾರತೀಯ ಈ ಲಸಿಕೆ ಮಾರುಕಟ್ಟೆಗೆ ಬರಲಿದೆ.